ದೇಶಪ್ರಮುಖ ಸುದ್ದಿ

ನ್ಯಾಯಮೂರ್ತಿಗಳ ನೇಮಕದಲ್ಲಿ ವಿಳಂಬ ಧೋರಣೆ ಸರಿಯಲ್ಲ: ಸಿಜೆಐಗೆ ಹಿರಿಯ ನ್ಯಾಯಾಧೀಶರ ಪತ್ರ

ಹೊಸದಿಲ್ಲಿ (ಏ.12): ಇಬ್ಬರು ನ್ಯಾಯಾಧೀಶರನ್ನು ನೇಮಕಗೊಳಿಸುವ ವಿಚಾರದಲ್ಲಿ ಸರಕಾರ ಅನುಸರಿಸುತ್ತಿರುವ ವಿಳಂಬ ನೀತಿಯಿಂದ ಅಸಮಾಧಾನಗೊಂಡಿರುವ ಹಿರಿಯ ನ್ಯಾಯಾಧೀಶ ಕುರಿಯನ್ ಜೋಸೆಫ್ ಅವರು, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಪತ್ರ ಬರೆದು ಸುಪ್ರೀಂ ಕೋರ್ಟಿನ ಅಸ್ತಿತ್ವವೇ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಒಬ್ಬರು ನ್ಯಾಯಾಧೀಶರು ಹಾಗೂ ಹಿರಿಯ ವಕೀಲರನ್ನು ಪದೋನ್ನತಿಗೊಳಿಸುವಂತೆ ಕೊಲಿಜಿಯಂ ಮಾಡಿರುವ ಶಿಫಾರಸುಗಳನ್ನು ಜಾರಿಗೆ ತರದೆ ಸರಕಾರ ತೋರಿಸುತ್ತಿರುವ ಅನಾಸಕ್ತಿಗೆ ಸುಪ್ರೀಮ್‍ ಕೋರ್ಟ್ ಪ್ರತಿಕ್ರಿಯಿಸದೇ ಇದ್ದರೆ ಇತಿಹಾಸ ನಮ್ಮನ್ನು ಕ್ಷಮಿಸದು ಎಂದು ತಮ್ಮ ಪತ್ರದಲ್ಲಿ ಜಸ್ಟಿಸ್ ಜೋಸೆಫ್ ಹೇಳಿದ್ದಾರೆ. ಏಪ್ರಿಲ್ 9 ರಂದು ಬರೆಯಲಾಗಿರುವ ಈ ಪತ್ರದ ಪ್ರತಿಯನ್ನು ನ್ಯಾಯಾಲಯದ ಇತರ 22 ನ್ಯಾಯಾಧೀಶರುಗಳಿಗೆ ಕಳುಹಿಸಲಾಗಿದೆ.

ಹಿರಿಯ ವಕೀಲ ಇಂದು ಮಲ್ಹೋತ್ರ ಹಾಗೂ ಉತ್ತರಾಖಂಡ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಕೆ.ಎಂ. ಜೋಸೆಫ್ ಅವರನ್ನು ಸುಪ್ರೀಂ ಕೋರ್ಟಿಗೆ ಭಡ್ತಿ ನೀಡುವಂತೆ ಕೊಲಿಜಿಯಂ ಜನವರಿ 10 ರಂದು ಶಿಫಾರಸು ಮಾಡಿತ್ತು. ಮೂರು ತಿಂಗಳಾದರೂ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ವಿಚಾರದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಮಿಶ್ರಾ ಅವರು ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದ ಜಸ್ಟಿಸ್ ಕುರಿಯನ್ ಜೋಸೆಫ್, ಹೆರಿಗೆಯ ಸಮಯವಾದಾಗ ಸಹಜ ಹೆರಿಗೆಯಾಗದೇ ಇದ್ದಲ್ಲಿ ತುರ್ತಾಗಿ ಸಿಸೇರಿಯನ್ ಮಾಡಬೇಕಾಗುತ್ತದೆ. ಇಂತಹ ಒಂದು ಶಸ್ತ್ರಕ್ರಿಯೆ ಸರಿಯಾದ ಸಮಯದಲ್ಲಿ ನಡೆಸದೇ ಇದ್ದಲ್ಲಿ ಗರ್ಭದಲ್ಲಿರುವ ಮಗು ಸಾಯಬಹುದು ಎಂದು ಮಾರ್ಮಿಕವಾಗಿ ಬರೆದಿದ್ದಾರೆ.

ಕಳೆದ ತಿಂಗಳು ಇನ್ನೊಬ್ಬ ಹಿರಿಯ ನ್ಯಾಯಾಧೀಶ ಜಸ್ಟಿಸ್ ಚಲಮೇಶ್ವರ್ ಕೂಡ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಹೈಕೋರ್ಟ್ ಭಡ್ತಿಗಾಗಿ ಹೆಸರೊಂದನ್ನು ಕೊಲಿಜಿಯಂ ಶಿಫಾರಸು ಮಾಡಿರುವ ಹೊರತಾಗಿಯೂ ಕಾನೂನು ಸಚಿವಾಲಯ ನೇರವಾಗಿ ಕರ್ನಾಟಕ ಹೈಕೋರ್ಟಿಗೆ ಪತ್ರ ಬರೆದ ವಿಚಾರವಾಗಿ ತಮ್ಮ ಕಳವಳ ವ್ಯಕ್ತಪಡಿಸಿದ್ದರು. (ಎನ್.ಬಿ)

Leave a Reply

comments

Related Articles

error: