
ಮೈಸೂರು
ತೆರಿಗೆಗಳ ಸಮರ್ಪಕ ವಸೂಲಾತಿಗೆ ಕ್ರಮ ಅಗತ್ಯ
ಮುಂದಿನ ಮಾರ್ಚ್ನಲ್ಲಿ ಮಂಡನೆಯಾಗಲಿರುವ ಮೈಸೂರು ಮಹಾನಗರ ಪಾಲಿಕೆಯ 2017-18ನೇ ಸಾಲಿನ ಬಜೆಟ್ ತಯಾರಿಕೆ ಸಂಬಂಧ ಮೇಯರ್ ಬಿ.ಎಲ್. ಭೈರಪ್ಪ ಅಧ್ಯಕ್ಷತೆಯಲ್ಲಿ ಬುಧವಾರದಂದು ಮಹಾನಗರ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಆಯವ್ಯಯ ಪಟ್ಟಿಯಂತೆ ನಿರ್ದಿಷ್ಟ ಗುರಿ ತಲುಪಲು ತೆರಿಗೆಗಳ ಸಮರ್ಪಕ ವಸೂಲಾತಿ ಆಗಬೇಕೆಂಬುದೂ ಸೇರಿದಂತೆ ಹತ್ತು-ಹಲವು ಸಲಹೆಗಳು ವ್ಯಕ್ತವಾದವು. ಮಾಜಿ ಉಪ ಮೇಯರ್ ಪುಷ್ಪಾವಲ್ಲಿ ಮಾತನಾಡಿ, ಮಹಿಳೆಯರ ಕಲ್ಯಾಣ ಕಾರ್ಯಕ್ರಮಗಳಿಗೆ ಪಾಲಿಕೆ ಮೀಸಲಿಡುತ್ತಿರುವ ಅನುದಾನದ ಮೊತ್ತದಲ್ಲಿ ಇಳಿಮುಖವಾಗುತ್ತಿದೆ. ಕಳೆದ ಬಾರಿ 10 ಲಕ್ಷ ರೂ. ಮೀಸಲಿರಿಸಿದ್ದರೆ, ಈ ಸಾಲಿನಲ್ಲಿ 5 ಲಕ್ಷ ರೂ.ಗೆ ಇಳಿಸಲಾಗಿದೆ. 2017-18ನೇ ಸಾಲಿನಲ್ಲಿ ಹೆಚ್ಚಿನ ಅನುದಾನ ಮೀಸಲಿರಿಸಲು ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಮಾಜಿ ಮೇಯರ್ ಪಿ. ವಿಶ್ವನಾಥ್ ಮಾತನಾಡಿ, ಬಜೆಟ್ನಲ್ಲಿ ಹಾಕಿಕೊಂಡ ಯೋಜನೆಗಳನ್ನು ನಿಗದಿತ ಸಮಯದೊಳಗೆ ಅನುಷ್ಠಾನಕ್ಕೆ ಮುಂಗಡವಾಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ವಿವಿಧ ತೆರಿಗೆಗೆಳ ವಸೂಲಾತಿಗೆ ಗಮನಹರಿಸಬೇಕು. ಆಸ್ತಿ ತೆರಿಗೆ ಶೇ.50ರಷ್ಟು ಸಂಗ್ರಹವಾಗಿದ್ದರೂ ಅದನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಪಾರಂಪರಿಕ ನಗರ ಮತ್ತು ಬೃಹತ್ ಮಹಾನಗರ ಪಾಲಿಕೆ ಎಂದು ಬಜೆಟ್ನಲ್ಲಿ ಘೋಷಣೆ ಮಾಡಬೇಕು. ಇದನ್ನು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕಳುಹಿಸಿದರೆ, ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಲಭ್ಯವಾಗಲಿದೆ ಎಂದು ಹೇಳಿದರು.
ಮಾಜಿ ಮೇಯರ್ ಒಬ್ಬರು ಇಂಜಿನಿಯರ್ಗಳ ಕುರಿತು ಮಾಡಿದ ಟೀಕೆ ಗದ್ದಲದ ವಾತಾವರಣವನ್ನು ಸೃಷ್ಟಿಸಿತು. ಮಾಜಿ ಮೇಯರ್ ಪ್ರಕಾಶ್ ಮಾತನಾಡಿ, ನಮ್ಮ ಇಂಜಿನಿಯರ್ಗಳು ಮಾಡುವ ಅಂದಾಜು ಪಟ್ಟಿ ಅವೈಜ್ಞಾನಿಕವಾಗಿರುತ್ತದೆ. ಜತೆಗೆ 1 ಕೋಟಿ ಮೊತ್ತದ ಅಂದಾಜು ಪಟ್ಟಿಗೆ 3 ಕೋಟಿಯಷ್ಟು ಹೆಚ್ಚಳ ಮಾಡಲಾಗಿರುತ್ತದೆ. ಇದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಅನುಕೂಲವಾಗುತ್ತದೆ. ಇದರಿಂದ ನಗರ ಹಾಳಾಗುತ್ತಿದೆ ಎಂದು ದೂರಿದರು. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಎಂ. ಲಕ್ಷ್ಮಣ್, ಇಂಜಿನಿಯರ್ಗಳ ಬಗ್ಗೆ ಈ ರೀತಿ ವಿನಾ ಕಾರಣ ಆರೋಪ ಮಾಡುವುದು ಸರಿಯಲ್ಲ. ಅವೈಜ್ಞಾನಿಕ ಅಂದಾಜು ಪಟ್ಟಿ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಇಂಜಿನಿಯರ್ಗಳು ಹಲವು ನಿಯಮಗಳನ್ನು ಅನುಸರಿಸುತ್ತಾರೆ ಎಂದರು.
ಉಪ ಮೇಯರ್ ವನಿತಾ ಪ್ರಸನ್ನ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಬಾಲು, ಪಾಲಿಕೆ ಸದಸ್ಯರಾದ ಚಲುವೇಗೌಡ, ಸ್ನೇಕ್ ಶ್ಯಾಮ್, ಮಹದೇವಮ್ಮ, ಪಾಲಿಕೆ ಆಯುಕ್ತ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.