ದೇಶಪ್ರಮುಖ ಸುದ್ದಿ

65ನೇ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ವಿನೋದ್ ಖನ್ನಾಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಶ್ರೀದೇವಿ ಅತ್ಯುತ್ತಮ ನಟಿ

ನವದೆಹಲಿ,ಏ.13-2017ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದೆ. ನವದೆಹಲಿಯ ಶಾಸ್ತ್ರಿ ಭವನ್ ನಲ್ಲಿರುವ ಪಿ.ಐ.ಬಿ ಕಾನ್ಫರೆನ್ಸ್ ರೂಮ್ ನಲ್ಲಿ 2017ನೇ ಸಾಲಿನ ಪ್ರತಿಷ್ಟಿತ 65ನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ನಟಿ ತಾರಾ ಅಭಿನಯದ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. ಬಾಲಿವುಡ್ ನಟ ದಿವಂಗತ ವಿನೋದ್ ಖನ್ನಾ ಅವರಿಗೆ `ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಯನ್ನು ಮರಣೋತ್ತರವಾಗಿ ನೀಡಲಾಗಿದೆ. ‘ಮಾಮ್’ ಚಿತ್ರದಲ್ಲಿನ ನಟನೆಗಾಗಿ ನಟಿ ದಿವಂಗತ ಶ್ರೀದೇವಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಲಭಿಸಿದೆ.

ಬೆಂಗಾಲಿ ಸಿನಿಮಾ ‘ನಗರ್ ಕಿರ್ತನ್’ ಚಿತ್ರದ ಅಭಿನಯಕ್ಕಾಗಿ ರಿದ್ಧಿ ಸೇನ್ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರೆ, ಇರಾದಾ ಚಿತ್ರದ ಅಭಿನಯಕ್ಕಾಗಿ ನಟ ಫಹಾದ್ ಫಾಝಿಲ್, ನಟಿ ದಿವ್ಯಾ ದತ್ತಾ ಅತ್ಯುತ್ತಮ ನಟ, ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಅತ್ಯುತ್ತಮ ಮನರಂಜನಾ ಚಿತ್ರವಾಗಿ, ಅಸ್ಸಾಮೀಸ್ ಚಿತ್ರವಾದ ವಿಲೇಜ್ ರಾಕ್ ಸ್ಟಾರ್ಸ್ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.

ವಿಶ್ವಾಸಪೂರ್ವಂ ಮನ್ಸೂರ್ ಚಿತ್ರದ ಪೊಯಿ ಮರಂಜಾ ಕಲಂ ಹಾಡಿಗಾಗಿ ಕೆ.ಜೆ.ಯೇಸುದಾಸ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ, ಕಾಟ್ರು ವೇಲಿಯಿದೈ ಚಿತ್ರದ ವಾನ್ ಹಾಡಿಗಾಗಿ ಶಾಶಾ ತಿರುಪತಿ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಾರ್ಚ್ 22 ಚಿತ್ರದ ಮುತ್ತು ರತ್ನದ ಪ್ಯಾಟೆ ಹಾಡಿಗಾಗಿ ಪ್ರಹ್ಲಾದ್ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಮಲಯಾಳಂನ ಭಯಾನಕಂ ಚಿತ್ರಕ್ಕಾಗಿ ಜಯರಾಜ್ ಅತ್ಯುತ್ತಮ ನಿರ್ದೇಶಕ, ಸಿಂಜಾರ್ ಚಿತ್ರದ ನಿರ್ದೇಶಕ ಪಾಂಪಲ್ಲಿ ತಮ್ಮ ಚೊಚ್ಚಲ ಚಿತ್ರದಲ್ಲೇ ಇಂದಿರಾಗಾಂಧಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಮರ್ ಭರತ್ ದಿಯೋಕರ್ ನಿರ್ದೇಶನದ ‘ಮೋರ್ಕ್ಯಾ’ ಅತ್ಯುತ್ತಮ ಮಕ್ಕಳ ಚಿತ್ರ, ಅಸ್ಸಾಮೀಸ್ ಚಿತ್ರವಾದ ವಿಲೇಜ್ ರಾಕ್ ಸ್ಟಾರ್ಸ್ ದಲ್ಲಿನ ಅಭಿನಯಕ್ಕಾಗಿ ಬನಿತಾ ದಾಸ್ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ನಿರ್ದೇಶಕ ಶೇಖರ್ ಕಪೂರ್ ನೇತೃತ್ವದ ಜ್ಯೂರಿಯಲ್ಲಿ ದಕ್ಷಿಣ ಭಾರತದ ನಟಿ ಗೌತಮಿ, ಕನ್ನಡ ನಿರ್ದೇಶಕ ಪಿ.ಶೇಷಾದ್ರಿ ಸೇರಿದಂತೆ ಒಟ್ಟು 10 ಸದಸ್ಯರಿದ್ದರು. ಮೇ 3 ರಂದು 65ನೇ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. (ಎಂ.ಎನ್)

Leave a Reply

comments

Related Articles

error: