ಕರ್ನಾಟಕ

ಶ್ರೀಕೋದಂಡರಾಮ ದೇವಾಲಯದ ಜಾಗ ದಲಿತರಿಗೆ ಮೀಸಲಿಡಿ : ದಲಿತ ಸಂಘಟನೆಗಳ ಆಗ್ರಹ

ರಾಜ್ಯ(ಮಡಿಕೇರಿ) ಏ.13 : –  ನಗರದ ಮಲ್ಲಿಕಾರ್ಜುನ ನಗರ ಬಡವಾಣೆಯ ಶ್ರೀಕೋದಂಡರಾಮ ದೇವಾಲಯದ ವ್ಯಾಪ್ತಿಯಲ್ಲಿ ದಲಿತರ ಏಳಿಗೆಗಾಗಿ ಮೀಸಲಿಟ್ಟಿರುವ ಜಮೀನಿನಲ್ಲಿ ಸುಮಾರು 12 ಸೆಂಟ್ ಜಾಗವನ್ನು ರಾಮ ಮಂದಿರದ ಅಧ್ಯಕ್ಷರ ಹೆಸರಿನಲ್ಲಿ ಹಿರಿಯ ಪತ್ರಕರ್ತರೊಬ್ಬರು ತಮ್ಮ ಸ್ವಾಧೀನಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘಟನೆಗಳು ತಕ್ಷಣ ಸಂಬಂಧಿಸಿದ ಪತ್ರಕರ್ತರ ಹೆಸರಿನಲ್ಲಿರುವ ಫಾರಂ ನಂ.3 ದಾಖಲೆಯನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿವೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ನಗರದ ಶ್ರೀಕೊದಂಡರಾಮ ದೇವಾಲಯದ ಶ್ರೀರಾಮ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ಎಂ.ಜಿ.ವಿನೋದ್ ದಲಿತರ ಅಭ್ಯುದಯಕ್ಕಾಗಿ ಮೀಸಲಿಟ್ಟ ಜಮೀನನ್ನು ತಮ್ಮ ಪ್ರಭಾವ ಬಳಸಿ ಸ್ವಾಧೀನಕ್ಕೆ ಪಡೆದು ದಾಖಲೆಯನ್ನು ಸಿದ್ಧಪಡಿಸಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಹಲವು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಸಣ್ಣ ಗುಡಿಯೊಂದಿದ್ದು, ಸುತ್ತಮುತ್ತಲ ಜಮೀನನ್ನು ದಲಿತರ ಅಭಿವೃದ್ಧಿಗಾಗಿ ಮೀಸಲಿಡಲಾಗಿತ್ತು. ಶ್ರೀಕೋದಂಡರಾಮ ದೇವಾಲಯದ ಸಲಹೆಗಾರರಾಗಿ ಬಂದವರು  ಪ್ರಸ್ತುತ ಟ್ರಸ್ಟ್ ಒಂದನ್ನು ರಚಿಸಿಕೊಂಡು ರಾಮ ಮಂದಿರ ಸಮಿತಿಯ ಹೆಸರಿನಲ್ಲಿ ತಾವು ಅಧ್ಯಕ್ಷರೆಂದು ಹೇಳಿಕೊಂಡು 12 ಸೆಂಟ್ ಜಾಗಕ್ಕೆ ಒಡೆಯರಾಗಿದ್ದಾರೆ. ಈ ಜಾಗಕ್ಕೆ ಸಂಬಂಧಿಸಿದ ಕುಟುಂಬದವರು ಫಾರಂ ನಂ. 3 ದಾಖಲೆಗಾಗಿ ಕಳೆದ ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಆದರೆ ಕೇವಲ ನಾಲ್ಕೇ ದಿನಗಳಲ್ಲಿ ಪ್ರಭಾವಿ ಪತ್ರಕರ್ತರ ಹೆಸರಿಗೆ ದಾಖಲೆ ಸಿಕ್ಕಿದೆ ಎಂದು ಆರೋಪಿಸಿದರು.

ದಲಿತರಿಗಾಗಿ ಮೀಸಲಿಟ್ಟ ಜಾಗವನ್ನು ದಲಿತ ಸಮುದಾಯಕ್ಕೇ ಬಿಟ್ಟುಕೊಡಬೇಕು ಮತ್ತು ದೇವಾಲಯ ಸಮಿತಿ, ಟ್ರಸ್ಟ್ ಅಥವಾ ದೇವಾಲಯಕ್ಕೆ ಸಂಬಂಧಿಸಿದ ಯಾವುದೇ ಸಮಿತಿಯಾದರೂ ಅಧ್ಯಕ್ಷ ಸ್ಥಾನವನ್ನು ದಲಿತರಿಗೆ ಮೀಸಲಿಡಬೇಕೆಂದು ವಿನೋದ್ ಒತ್ತಾಯಿಸಿದರು.

ದಲಿತ ಸಂಘಟನೆಯ ಪ್ರಮುಖ ಡಿ.ಎಸ್.ನಿರ್ವಾಣಪ್ಪ ಮಾತನಾಡಿ ದಲಿತ ಸಮುದಾಯದ ಬಾಬು ಎಂಬುವವರು ದಲಿತರಿಗಾಗಿ ಮೀಸಲಿಟ್ಟ ಜಾಗ ಈಗ ಪ್ರಭಾವಿ ಪತ್ರಕರ್ತರೊಬ್ಬರ ಅಧೀನದಲ್ಲಿದೆ. ಅಕ್ರಮವಾಗಿ ಸುಳ್ಳು ದಾಖಲೆ ಸೃಷ್ಠಿಸಿ ಪ್ರಭಾವವನ್ನು ಬಳಸಿ ಫಾರಂ ಸಂಖ್ಯೆ 3 ದಾಖಲೆಯನ್ನು ಪಡೆದಿದ್ದಾರೆ ಎಂದು ಆರೋಪಿಸಿದರು. ಹಿರಿಯ ಪತ್ರಕರ್ತರ ಮೇಲೆ ನಮಗೆ ಅಪಾರವಾದ ಗೌರವವಿದೆ. ಆದರೆ ಅವರು ಈ ಜಾಗದ ವಿಚಾರದಲ್ಲಿ ತಪ್ಪು ಮಾಡಿದ್ದಾರೆ ಎಂದು ನಿರ್ವಾಹಣಪ್ಪ ಟೀಕಿಸಿದರು. ಈ ದಾಖಲೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳು ಹಾಗೂ ನಗರಸಭಾ ಆಯುಕ್ತರಿಗೆ ದೂರು ನೀಡಿರುವುದಾಗಿ ತಿಳಿಸಿದರು.

ಬಾಬು ಅವರ ಹೆಸರಿನಲ್ಲಿ ದಾಖಲೆ ಇದ್ದು, ಇವರು ಫಾರಂ ಸಂಖ್ಯೆ 3 ಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ವಿಲೇವಾರಿ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಆದರೆ ಸಂಬಂಧಿಸಿದ ಪತ್ರಕರ್ತರು ತಮ್ಮ ಪ್ರಭಾವ ಬಳಸಿ ಕೆಲವೇ ದಿನಗಳಲ್ಲಿ ಜಾಗವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಲ್ಲಿಕಾರ್ಜುನ ನಗರದಲ್ಲಿರುವ ಡಾ.ಅಂಬೇಡ್ಕರ್ ಭವನ ದಲಿತರ ಅಭಿವೃದ್ಧಿಪರ ಚಟುವಟಿಕೆಗಾಗಿ ನಿರ್ಮಾಣಗೊಂಡಿದೆ. ಆದರೆ ಇಲ್ಲಿ ಅರ್ಚಕರಿಗೆ ವಾಸಕ್ಕೆ ಅವಕಾಶ ಮಾಡಿಕೊಡಲಾಗಿದೆ ಮತ್ತು ಜಿಮ್ ತರಬೇತಿ ಸಂಸ್ಥೆಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ ನಿರ್ವಾಣಪ್ಪ ಕಾನೂನು ಬಾಹಿರವಾಗಿ ದಲಿತರಿಗೆ ಅನ್ಯಾಯವಾಗುವ ರೀತಿಯಲ್ಲಿ ಹಿರಿಯ ಪತ್ರಕರ್ತರೊಬ್ಬರ ಪರವಾಗಿ ಆಗಿರುವ ಜಾಗ ಮಂಜೂರಾತಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಪ್ರಮುಖರಾದ ಕೆ.ಬಿ.ರಾಜು, ಹೆಚ್.ಈ.ಸಣ್ಣಪ್ಪ, ಪಾಲೇಮಾಡಿನ ಮೊಣ್ಣಪ್ಪ ಹಾಗೂ ಶಿವಕುಮಾರ್ ಉಪಸ್ಥಿತರಿದ್ದರು.     (ಕೆಸಿಐ,ಎಸ್.ಎಚ್)

Leave a Reply

comments

Related Articles

error: