
ಕರ್ನಾಟಕ
ಅತ್ಯಾಚಾರಕ್ಕೆ ಸಹಕರಿಸದ 5 ವರ್ಷದ ಬಾಲಕಿಯ ಕತ್ತು ಸೀಳಿ ಕೊಲೆ: ಆರೋಪಿಯ ಬಂಧನ
ಜೆಮ್ಶೆಡ್ಪುರ (ಏ.14): ಅತ್ಯಾಚಾರಕ್ಕೆ ಪ್ರತಿರೋಧ ಒಡ್ಡಿದ ಐದು ವರ್ಷದ ಬಾಲೆಯನ್ನು ಆಕೆಯ ಸಂಬಂಧಿಯೇ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣ ಆರೋಪಿ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಏ.4ರಂದು ಪಾಳುಬಿದ್ದ ಕಟ್ಟಡದಲ್ಲಿ ಬಾಲಕಿಯ ಮೇಲೆ ಆತ ಅತ್ಯಾಚಾರ ಎಸಗಲು ಯತ್ನಿಸಿದ್ದ. ಆಕೆ ಪ್ರತಿರೋಧ ಒಡ್ಡಿದ ಕಾರಣ ತಕ್ಷಣ ಚಾಕುವಿನಿಂದ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ನಂತರ ಶವವನ್ನು ಕಸದ ತೊಟ್ಟಿಯಲ್ಲಿ ಎಸೆದಿದ್ದ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಅನೂಪ್ ಬರ್ತ್ರೇ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಹತ್ಯೆ ಮಾಡಿದ ಬಳಿಕ ಬಂಧುಗಳ ಜತೆ ಆತ ಓಡಾಡಿಕೊಂಡಿದ್ದ. ಸ್ಥಳೀಯ ಪೊಲೀಸರು ಬಾಲಕಿಗಾಗಿ ಶೋಧ ಮುಂದುವರಿಸಿದ್ದರು. ಬಾಲಕಿ ನಾಪತ್ತೆಯಾಗಿದ್ದ ಸಮಯ ಮತ್ತು ದಿನದಂದು ಆರೋಪಿ ಪಾಳುಕಟ್ಟಡದಿಂದ ಹೊರ ಬರುತ್ತಿದ್ದುದನ್ನು ನೋಡಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಹಿರಂಗವಾಗಿದೆ.
ಆರಂಭದಲ್ಲಿ ತನಿಖೆಯ ದಿಕ್ಕುತಪ್ಪಿಸಲು ಪ್ರಯತ್ನಿಸಿದರೂ, ಕೊನೆಗೆ ತಪ್ಪೊಪ್ಪಿಕೊಂಡ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯ ಎರಡು ಬೆಳ್ಳಿಯ ಬಳೆ, ತಾಯಿತ ಹಾಗೂ ಹತ್ಯೆ ಮಾಡಲು ಬಳಸಿದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. (ಎನ್.ಬಿ)