ದೇಶಪ್ರಮುಖ ಸುದ್ದಿ

ಪಾಟ್ನಾದಲ್ಲಿ “ಧರ್ಮ ಉಳಿಸಿ, ದೇಶ ಉಳಿಸಿ” ರ‍್ಯಾಲಿಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಯಾರಿ

ಹೊಸದಿಲ್ಲಿ (ಏ.14): ‘ಇಸ್ಲಾಂ ಅಪಾಯದಲ್ಲಿದೆ’ ಎಂಬ ಸಂದೇಶದೊಂದಿಗೆ ದೇಶದಲ್ಲಿನ ಮುಸ್ಲಿಂ ಸಮುದಾಯ ಒಗ್ಗೂಡುವಂತೆ ಕರೆ ನೀಡಲಾಗಿದ್ದು, ಇಡೀ ದೇಶದ ಮುಸ್ಲಿಂ ಸಮುದಾಯ ಒಟ್ಟಾಗಬೇಕೆಂದು ಸಂದೇಶ ಸಾರುವ ಸಲುವಾಗಿ ಪಾಟ್ನಾದಲ್ಲಿ ರ್ಯಾಲಿಯೊಂದನ್ನು ಆಯೋಜಿಸಲಾಗಿದೆ.

ಪಾಟ್ನಾದ ಫುಲ್‌ವರ್‌ ಷರೀಫ್ ಮೂಲದ ಇಮರತ್ ಶರಿಯಾ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಜಂಟಿಯಾಗಿ ಏ.15 ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ “ದೀನ್ ಬಚಾವೊ ದೇಶ್ ಬಚಾವೊ” (ಧರ್ಮ ಉಳಿಸಿ ದೇಶ ಉಳಿಸಿ) ಎಂಬ ಬೃಹತ್ ಪ್ರತಿಭಟನಾ ರ‍್ಯಾಲಿ ಆಯೋಜಿಸಿವೆ.

ದೇಶದ ಹಲವಾರು ಮಂದಿ ಇಸ್ಲಾಂ ಧರ್ಮಗುರುಗಳು ಮತ್ತು ಮುಖಂಡರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಮುಸ್ಲಿಂ ಧರ್ಮವೂ ಸುರಕ್ಷಿತವಾಗಿಲ್ಲ; ದೇಶ ಕೂಡಾ ಸುರಕ್ಷಿತವಾಗಿಲ್ಲ ಎಂಬ ಭಾವನೆಯನ್ನು ಈ ರ‍್ಯಾಲಿ ಅಭಿವ್ಯಕ್ತಪಡಿಸಲಿದೆ.

ಉದ್ದೇಶಿತ ತ್ರಿವಳಿ ತಲಾಕ್ ಮಸೂದೆಯನ್ನು ವಿರೋಧಿಸಿ, ದೇಶಾದ್ಯಂತ ಬುರ್ಖಾಧಾರಿ ಮಹಿಳೆಯರ ಬೃಹತ್ ಪ್ರತಿಭಟನೆಗಳನ್ನು ಆಯೋಜಿಸಿದ್ದ ಮುಸ್ಲಿಂ ಮಂಡಳಿ, ಇದೀಗ ದೊಡ್ಡ ಕಾರ್ಯಯೋಜನೆಗಾಗಿ ಇಮರತ್ ಶರಿಯಾ ಜತೆ ಕೈಜೋಡಿಸಿದೆ. ದೇಶದ ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ, ಸಂವಿಧಾನ ಹಾಗೂ ಇಸ್ಲಾಂ ಧರ್ಮಕ್ಕೆ ಅಪಾಯವಿರುವ ಅಂಶವನ್ನು ಹೋರಾಟಕ್ಕಾಗಿ ಕೈಗೆತ್ತಿಕೊಂಡಿದೆ.

ಇಮರತ್ ಶರಿಯಾ 1921ರಲ್ಲಿ ಸ್ಥಾಪನೆಯಾದ ಸಂಘಟನೆಯಾಗಿದ್ದು, ಬಿಹಾರ, ಜಾರ್ಖಂಡ್ ಹಾಗೂ ಒಡಿಶಾದಲ್ಲಿ ಶರಿಯಾ ಸಂಬಂಧಿ ವಿಚಾರಗಳ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದೆ.

“ಬಿಜೆಪಿ ಸಂವಿಧಾನಾತ್ಮಕ ಬದ್ಧತೆಯನ್ನು ಕಲಿಯುತ್ತದೆ ಎಂದು ನಾಲ್ಕು ವರ್ಷಗಳ ಕಾಲ ನಾವು ಕಾದೆವು. ಮುಸ್ಲಿಂ ನಂಬಿಕೆಯ ಭಾಗವಾದ ವೈಯಕ್ತಿಕ ಕಾನೂನಿನ ಮೇಲೆ ದಾಳಿ ನಡೆಯುತ್ತಿದೆ. ದೇಶದ ಜತೆ ಮುಸ್ಲಿಂ ಧರ್ಮ ಕೂಡಾ ಅಪಾಯದಲ್ಲಿದೆ ಎಂದು ದೇಶದ ಜನರಿಗೆ ತಿಳಿಸುವುದು ಈಗ ಅನಿವಾರ್ಯವಾಗಿದೆ” ಎಂದು ಎಐಎಂಪಿಎಲ್‌ಬಿ ಪ್ರಧಾನ ಕಾರ್ಯದರ್ಶಿ ಮೌಲಾನಾ ರಹ್ಮಾನಿ ಹೇಳಿದ್ದಾರೆ.

ದೀನ್ ಬಚಾವೊ ದೇಶ್ ಬಚಾವೊ ಆಂದೋಲನ ಮುಸ್ಲಿಂ ಸಮುದಾಯಕ್ಕೆ ಜಾಗೃತಿಯ ಕರೆ. “ನಾವು ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ನಮಗೆ ಎಚ್ಚೆತ್ತುಕೊಳ್ಳಲು ಅವಕಾಶವಾಗುವುದಿಲ್ಲ ಎಂಬ ಸಂದೇಶ ರವಾನಿಸುವುದು ನಮ್ಮ ಉದ್ದೇಶ. ಅರೆಸ್ಸೆಸ್‌ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದರಿಂದ ಹಲವು ಸಮಸ್ಯೆಗಳು ಉದ್ಭವವಾಗಿವೆ.

ತ್ರಿವಳಿ ತಲಾಕ್ ನಿಷೇಧದ ಬಳಿಕ ಸಮಾನ ನಾಗರಿಕ ಸಂಹಿತೆ ಹಾಗೂ ಧ್ವನಿವರ್ಧಕದ ಮೂಲಕ ಬಾಂಗ್ ನಿಷೇಧಿಸುವ ಕಾನೂನು ಕೂಡಾ ಬರಬಹುದು” ಎಂದು ಇಮರತ್ ಶರಿಯಾ ಮುಖ್ಯಸ್ಥರೂ ಆಗಿರುವ ಅವರು ಎಚ್ಚರಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: