
ಪ್ರಮುಖ ಸುದ್ದಿಮೈಸೂರು
ಡಿ. 2-6 : ಜೆಎಸ್ಎಸ್ ಸಂಗೀತ ಸಮ್ಮೇಳನ
ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸಂಸ್ಮರಣೆಯ 23ನೇ ರಾಷ್ಟ್ರೀಯ ಸಂಗೀತ ಸಮ್ಮೇಳನ ಡಿಸೆಂಬರ್ 2ರಿಂದ 6ರ ವರೆಗೆ ಮೈಸೂರಿನಲ್ಲಿ ನಡೆಯಲಿದೆ.
ಜೆಎಸ್ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ನಗರದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಮೃದಂಗ ವಿದ್ವಾನ್ ಟಿ.ಎ.ಎಸ್. ಮಣಿ ಅವರನ್ನು ಆಯ್ಕೆ ಮಾಡಲಾಗಿದೆ.
ಡಿಸೆಂಬರ್ 2ರ ಶುಕ್ರವಾರ ಸಂಜೆ 6 ಗಂಟೆಗೆ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮೀಜಿ ಆತ್ಮಜ್ಞಾನಾನಂದಜೀ ಮಹಾರಾಜ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಸಂಗೀತ ಸೇವಾನಿಧಿ ಶ್ರೀ ಕೆ.ವಿ. ಮೂರ್ತಿ ಅವರು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಗೀತ ವಿದ್ಯಾನಿಧಿ ಶ್ರೀ ವಿದ್ಯಾಭೂಷಣ ಅವರು “ನಾದನಮನ” ಸವಿಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಸಂಗೀತ ಕಲಾಪೋಷಕ ಶ್ರೀ ಕೆ.ಎಸ್.ಎನ್. ಪ್ರಸಾದ್ ಅವರಿಗೆ ಈ ಸಾಲಿನ “ಸಂಗೀತ ಸೇವಾನಿಧಿ” ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಾಧಕರಾದ ಎಚ್.ಎಸ್. ಬಾಲಕೃಷ್ಣ (ಗಾಯನ), ಎಂ. ವಾಸುದೇವರಾವ್ (ಮೃದಂಗ), ಟಿ.ಆರ್. ಶ್ರೀನಾಥ್ (ವೇಣುವಾದನ), ಡಾ. ಗೀತಾಸೀತಾರಾಮ್ (ಸಂಗೀತಶಾಸ್ತ್ರ), ಡಾ. ಎಂ. ಸೂರ್ಯಪ್ರಸಾದ್ (ಕಲಾವಿಮರ್ಶೆ) ಹಾಗೂ ಪುಷ್ಪಅಯ್ಯಂಗಾರ್ ಹಾಗೂ ವೈದೇಹಿ ಅಯ್ಯಂಗಾರ್ (ಕಲಾಪೋಷಣೆ) ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾವುದುದು.
ಉದ್ಘಾಟನಾ ಸಮಾರಂಭಕ್ಕೆ ಮುನ್ನ ಸಂಜೆ 5.30ಕ್ಕೆ ಸಮ್ಮೇಳನಾಧ್ಯಕ್ಷರನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಸರಸ್ವತಿಪುರಂ ಅಗ್ನಿಶಾಮಕ ವೃತ್ತದಿಂದ ಜೆಎಸ್ಎಸ್ ಮಹಿಳಾ ಕಾಲೇಜಿನ ಆವರಣದವರೆಗೆ ಕರೆತರಲಾಗುವುದು. ಸಮಾರಂಭದ ನಂತರ ಸಂಜೆ 7ಕ್ಕೆ ಡಾ. ವಿದ್ಯಾಭೂಷಣ ಅವರಿಂದ ಗಾಯಕ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 3ರ ಶನಿವಾರ ಸಂಜೆ 5.30ಕ್ಕೆ ಯುವ ಕಲಾವಿದ ಜಿ.ಕೆ. ಮೋಹನಕೃಷ್ಣ ಅವರ ಗಾಯನ ಹಾಗೂ 6.30ಕ್ಕೆ ಚೆನ್ನೈನ ಅಭಿಷೇಕ್ ರಘುರಾಮ್ ಅವರಿಂದ ಗಾಯನ ಕಛೇರಿ ನಡೆಯಲಿದೆ.
ಡಿಸೆಂಬರ್ 4ರ ಭಾನುವಾರ ಸಂಜೆ 5ಕ್ಕೆ ಬೆಂಗಳೂರಿನ ಸಂಪಗೋಡು ವಿಘ್ನರಾಜ್ ಅವರಿಂದ ಗಾಯನ, ಸಂಜೆ 7ಕ್ಕೆ ಚೆನ್ನೈನ ಯು. ರಾಜೇಶ್ ಅವರಿಂದ ಗಾಯನ ಕಚೇರಿ ವ್ಯವಸ್ಥೆ ಆಗಿದೆ.
ಡಿಸೆಂಬರ್ 5ರ ಸೋಮವಾರ ಸಂಜೆ ಕುಮಾರಿಯರಾದ ಅರ್ಚನಾ ಮತ್ತು ಸಮನ್ವಿ ಅವರ ದ್ವಂದ್ವ ಗಾಯನ, ಸಂಜೆ 6.30ಕ್ಕೆ ಚೆನ್ನೈನ ಸಂದೀಪ ನಾರಾಯಣ್ ಅವರ ಗಾಯನ ಕಚೇರಿ ನಡೆಯಲಿದೆ.
ಡಿಸೆಂಬರ್ 6ರ ಮಂಗಳವಾರ ಸಂಜೆ 5ಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಅವರ ವೇಣುವಾದನದ ನಂತರ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭ ಶ್ರೀ ವಿದ್ವಾನ್ ಟಿ.ಎ.ಎಸ್. ಮಣಿ ಅವರಿಗೆ ‘ಸಂಗೀತ ವಿದ್ಯಾನಿಧಿ’ ಪ್ರಶಸ್ತಿಯನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಪ್ರದಾನ ಮಾಡುವ ಮೂಲಕ ಗೌರವಿಸುವರು.
ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಿ.ಬಸವರಾಜು ಅವರು ಸಮಾರೋಪ ಭಾಷಣ ಮಾಡುವರು. ಗಣೇಶ ಬೀಡಿ ವರ್ಕ್ಸ್ನ ಮ್ಯಾನೆಜಿಂಗ್ ಡೈರೆಕ್ಟರ್ ಡಾ. ಎಂ. ಜಗನ್ನಾಥ ಶೆಣೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭಾದ ಅಧ್ಯಕ್ಷ ಕೆ.ವಿ. ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಎಚ್. ಶ್ರೀನಿವಾಸ್ ಅವರು ಸಂಗೀತ ಸಮ್ಮೇಳನದ ಅಂಗವಾಗಿ ನಡೆಸಲಾಗಿದ್ದ ಸಂಗೀತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವರು.
ಸಮಾರಂಭದ ನಂತರ ಸಂಜೆ 7 ಗಂಟೆಗೆ ಆರ್.ಎ. ರಮಾಮಣಿ ಅವರಿಂದ ಗಾಯನ ಕಚೇರಿ ನಡೆಯಲಿದೆ.
ಡಿಸೆಂಬರ್ 3 ರಿಂದ 5 ರ ವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಕ್ರಮವಾಗಿ ಯುವ ಸಂಗೀತ ಕಲಾವಿದರಾದ ಅಭಿಜಿತ್ ಶ್ರೀ ನಿಶಾಂತ್, ಸಂಜಯನಾಗ್ ಅವರಿಂದ ಗಾಯನ ಕಚೇರಿ ನಡೆಯಲಿದೆ. ಬೆಳಗಿನ ವಿದ್ವತ್ ಗೋಷ್ಠಿಗಳಲ್ಲಿ ಸಮ್ಮೇಳನಾಧ್ಯಕ್ಷರಾದ ಟಿ.ಎಸ್.ಎಸ್. ಮಣಿ, ಡಾ. ನಾಗಮಣಿ ಶ್ರೀನಾಥ್, ಡಾ. ವರದರಮಗನ್, ಅಭಿಷೇಕ್ ರಘುರಾಮ್, ಡಾ. ವಿ. ಕೃಷ್ಣ, ಡಾ. ಎಸ್. ಶಂಕರ್, ವಿ.ವಿ. ರಮಣಮೂರ್ತಿ, ವೃಂದಾ ಆಚಾರ್ಯ, ಚಂಪಕಧಾಮ, ಡಾ. ಸುಕನ್ಯಾ ಪ್ರಭಾಕರ್, ಡಾ. ಎಸ್. ವಿಜಯರಾಘವನ್, ಬಿ.ಕೆ. ಚಂದ್ರಮೌಳಿ – ಮುಂತಾದ ವಿದ್ವಾಂಸರು ಪ್ರಾತ್ಯಕ್ಷಿಕೆ ಹಾಗೂ ಸೋದಾಹರಣ ಭಾಷಣ ಮಾಡಲಿದ್ದಾರೆ.
ಡಿಸೆಂಬರ್ 4 ರ ಬೆಳಗ್ಗೆ ಪೋಲೆಂಡ್ನ ವಾಕ್ಲಾಫ್ ಜಿಂಪೆಲ್ ಅವರು “ಜಾಸ್ ಹಾಗೂ ಎಲೆಕ್ಟ್ರಾನಿಕ್ ಮ್ಯೂಸಿಕ್” ಬಗ್ಗೆ ಹಾಗೂ ಅಮೆರಿಕದ ಡೇನಿಯಲ್ ಜೆ. ಮಿಲ್ಲರ್ ಅವರು “ಕ್ಲಾಸಿಕಲ್ ಎಲಿಮೆಂಟ್ಸ್ ಇನ್ ಎಕ್ಸ್`ಪೆರಿಮೆಂಟಲ್ ಮ್ಯೂಸಿಕ್” ಎಂಬ ಬಗ್ಗೆ ವಿಶೇಷ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಬೆಳಗಿನ ಗೋಷ್ಠಿಗಳು ಹಾಗೂ ಐದು ದಿನ ಸಂಜೆ ನಡೆಯಲಿರುವ ಎಲ್ಲ ಸಂಗೀತ ಕಾರ್ಯಕ್ರಮಗಳಿಗೂ ಸಂಗೀತಾಭ್ಯಾಸಿಗಳು, ವಿದ್ವಾಂಸರು, ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಭಾದ ಕಾರ್ಯದರ್ಶಿ ಪ್ರೊ. ಕೆ. ರಾಮಮೂರ್ತಿ ರಾವ್ ಅವರು ಕೋರಿದ್ದಾರೆ.