ಮೈಸೂರು

ಡಿಸೆಂಬರ್ 4: ನಾಲೆಗಳಿಗೆ ನೀರು ಬಿಡಿ ಇಲ್ಲವೇ ರೈತರಿಗೆ ವಿಷಕೊಡಿ ಚಳುವಳಿ: ಕುರುಬೂರ್ ಶಾಂತಕುಮಾರ್

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ  ಅವರ ಆಲನಹಳ್ಳಿ ಬಡಾವಣೆಯ ನಿವಾಸದ ಎದುರು ಡಿಸೆಂಬರ್ 4ರಂದು ಬೆಳಿಗ್ಗೆ 11ಗಂಟೆಗೆ ನಾಲೆಗೆ ನೀರು ಬಿಡಿ ಇಲ್ಲ, ರೈತರಿಗೆ ವಿಷಕೊಡಿ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.

ಮೈಸೂರಿನ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಂತಕುಮಾರ್, ರೈತರು ನೀರಿಲ್ಲದೇ ಗೋಳಾಡುತ್ತಿದ್ದರೂ  ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಅವರು ಕಂಡು ಕಾಣದಂತೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಿಲ್ಲೆಯ ಅಧಿಕಾರಿಗಳು ಗುಲಾಮಗಿರಿಯ ವರ್ತನೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ಕಬಿನಿ ಅಚ್ಚುಕಟ್ಟುಭಾಗದ ಒಂದು ಲಕ್ಷ ಎಕರೆ ಭತ್ತ ಕಟಾವಿಗೆ ಬರುತ್ತಿದ್ದು ಒಂದು ವಾರಗಳ ಕಾಲ ನೀರಿನ ಅವಶ್ಯಕತೆ ಇದೆ. ಅದಕ್ಕೆ ಒಂದು ಟಿ.ಎಂ.ಸಿ.ನೀರು ಬೇಕು. ಅಧಿಕಾರಿಗಳು ರೈತರ ಕಷ್ಟ ಅರಿಯದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈಗಲೂ ನದಿ ಮೂಲಕ ನಿತ್ಯ 1500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ನಿಲ್ಲಿಸಿ ಅಚ್ಚುಕಟ್ಟು ನಾಲೆಗಳಿಗೆ ಹರಿಸಿ ಎಂದು ಒತ್ತಾಯಿಸಿದರು.

ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬು ಸರಬರಾಜು ರೈತರಿಗೆ ಕಟಾವು ಸಾಗಾಣಿಕೆ ವೆಚ್ಚ ಕಳೆದು ಟನ್ ಗೆ 1700ರೂ.ನೀಡುತ್ತಾರೆ. ಸಕ್ಕರೆ ಬೆಲೆ ಏರಿಕೆಯಾಗಿದ್ದರೂ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಬೇರೆ ಜಿಲ್ಲೆಯ ರೈತರಿಗೆ ಹೆಚ್ಚುವರಿ ಬೆಲೆಯನ್ನು ನಿಗದಿ ಮಾಡಲಾಗಿದೆ. ಆದರೆ ಸ್ಥಳೀಯ ಮೈಸೂರು-ಚಾಮರಾಜನಗರ ಜಿಲ್ಲೆ ರೈತರನ್ನು ನಿರ್ಲಕ್ಷ್ಯಿಸಿ ಕಾರ್ಖಾನೆಯವರ ಹಿತರಕ್ಷಣೆಗೆ ನಿಂತಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ತಾಲೂಕು ಅಧ್ಯಕ್ಷ ವರಕೂಡು ಕೃಷ್ಣೇಗೌಡ, ಮುಖಂಡರಾದ ಬರಡನಪುರ ಎ.ನಾಗರಾಜು, ಅಂಬಳೆ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: