ಮೈಸೂರು

ಜನರಿಗೆ ಏಡ್ಸ್ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ: ಡಾ.ಸುವರ್ಣ

ಜೆಎಸ್ಎಸ್ ನರ್ಸಿಂಗ್ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಗುರುವಾರ ‍ಶ್ರೀ ರಾಜೇಂದ್ರ ಸಭಾಂಗಣದಲ್ಲಿ ‘ಎಚ್.ಐ.ವಿ.ಸೋಂಕಿನ ತಡೆಗೆ ಕೈಜೋಡಿಸಿ’ ಎಂಬ ಘೋಷಣೆಯೊಂದಿಗೆ ‘ವಿಶ್ವ ಏಡ್ಸ್ ದಿನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸುವರ್ಣ, ಎಚ್.ಐ.ವಿ. ಏಡ್ಸ್ ಯಾವ ರೀತಿಯಲ್ಲಿ ಹರಡುತ್ತದೆ? ಅದಕ್ಕೆ ಕಾರಣಗಳೇನು? ಅದನ್ನು ತಡೆಗಟ್ಟುವ ಕ್ರಮಗಳಾವುವು? ಎಂಬುದರ ಬಗ್ಗೆ ಮಾಹಿತಿ ನೀಡಿದರು. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಶೇ.85ರಷ್ಟು ಎಚ್ಐವಿ ಹರಡುತ್ತಿದೆ. ಏಡ್ಸ್ ಒಂದು ಮಾರಣಾಂತಿಕ ಕಾಯಿಲೆ. ಅದು ಒಂದು ಸಲ ಬಂದರೆ ಗುಣಮುಖವಾಗುವುದಿಲ್ಲ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು ಎಂದರು.

ಮೊಟ್ಟಮೊದಲ ಬಾರಿಗೆ 1981 ರಲ್ಲಿ ಅಮೇರಿಕಾದಲ್ಲಿ ಏಡ್ಸ್ ರೋಗ ಕಾಣಿಸಿತು. 1986 ರಲ್ಲಿ ಚೆನ್ನೈನಲ್ಲಿ ಕಾಣಿಸಿಕೊಂಡಿತು. ಇದೀಗ ಇಡೀ ಪ್ರಪಂಚದಾದ್ಯಂತ 36.7 ಲಕ್ಷ ಮಿಲಿಯನ್ ಜನರು ಎಚ್ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. 18.2 ಲಕ್ಷ ಮಿಲಿಯನ್ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅದರಲ್ಲಿ ಶೇ.6.5 ರಷ್ಟು ಮಕ್ಕಳು ಇದ್ದಾರೆ. ಕರ್ನಾಟಕದಲ್ಲಿ ಶೇ.0.36 ರಷ್ಟು ಎಚ್ಐವಿ ಸೋಂಕಿತರನ್ನು ಕಾಣಬಹುದಾಗಿದೆ. 15 ರಿಂದ 30 ವರ್ಷದ ವಯೋಮಾನದವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಮೈಸೂರಿನಲ್ಲಿ 23,157 ಮಂದಿ ಎಚ್ಐವಿ ಸೋಂಕಿತರಿದ್ದು, 7,505 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು, ಮೈಸೂರಿನಲ್ಲಿ 28 ಐಸಿಟಿಸಿ ಕೇಂದ್ರಗಳಿವೆ. 3 ಎ ಆರ್ ಟಿ ಕೇಂದ್ರಗಳಿವೆ. ಜೆಎಸ್ಎಸ್, ಕೆ.ಆರ್ ಹಾಸ್ಪಿಟಲ್ ಮತ್ತು ಆಶಾಕಿರಣ ಕೇಂದ್ರಗಳಾಗಿವೆ. ಹೆಚ್.ಡಿ.ಕೋಟೆ, ಬನ್ನೂರು, ಎಸ್ ವಿ ವೈ ಎಂ ಗಳಲ್ಲಿ ಎಆರ್ ಟಿ ಕೇಂದ್ರಗಳನ್ನು ತೆರೆಯಲಾಗಿದೆ.

ವರ್ಷದಿಂದ ವರ್ಷಕ್ಕೆ ಎಚ್ ಐ ವಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವಜನರು ಮತ್ತು ವಯೋಮಾನದವರಿಗೆ ಇದರ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರಘುಕುಮಾರ್ ಟಿ. ಮಾತನಾಡಿ, ಏಡ್ಸ್ ದಿನಾಚರಣೆ ಸಂಭ್ರಮಾಚರಣೆ ಅಲ್ಲ. ಸ್ಮರಣೀಯ ದಿನ. ಏಡ್ಸ್ ರೋಗಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿಲ್ಲ. ಅರಿವು ಮುಖ್ಯವಾಗುತ್ತದೆ. 1982 ರಿಂದ ಏಡ್ಸ್ ರೋಗ ನಿವಾರಣೆಗಾಗಿ ಔಷಧಿಗಳನ್ನು ಕಂಡುಹಿಡಿಯಲು ಸಂಶೋಧನೆಗಳು ನಡೆಯುತ್ತಿವೆ. ಆದರೆ ಸಾಧ್ಯವಾಗದೆ ಸೋತಿದ್ದೇವೆ. ಎಚ್ಐವಿ ರೋಗಕ್ಕೆ ಅರಿವೇ ಮದ್ದು. ಬೇರೆ ಯಾವ ಔಷಧಿಯೂ ಇಲ್ಲ ಎಂದು ಹೇಳಿದರು.

ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ.ಮಹೇಶ್ವರಪ್ಪ ಮಾತನಾಡಿದರು. ಪ್ರೊ.ಶೀಲಾ ವಿಲಿಯಮ್ಸ್, ಆನಂದಜ್ಯೋತಿ ಪಾಸಿಟಿವ್ ನೆಟ್ ವರ್ಕ್ ನ ಅಧ‍್ಯಕ್ಷರಾದ ಬಿ.ಎಸ್.ಲೋಕೇಶ್ ಕುಮಾರ್, ಪ್ರಕಾಶ್ ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: