ಪ್ರಮುಖ ಸುದ್ದಿಮೈಸೂರು

ಮೈಸೂರು ಪೊಲೀಸರ ಭರ್ಜರಿ ಬೇಟೆ: ಮಕ್ಕಳ ಮಾರಾಟ ಜಾಲ ಪ್ರಕರಣ: 11 ಆರೋಪಿಗಳ ಬಂಧನ; 16 ಮಕ್ಕಳ ರಕ್ಷಣೆ

ಮಕ್ಕಳ ಅಪಹರಣ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಒಟ್ಟು ಹನ್ನೊಂದು ಆರೋಪಿಗಳನ್ನು ಬಂಧಿಸಲಾಗಿದ್ದು, 9 ಹೆಣ್ಣು ಹಾಗೂ 7ಗಂಡು ಮಕ್ಕಳು ಸೇರಿದಂತೆ ಒಟ್ಟು 16ಮಕ್ಕಳನ್ನು ಸಂರಕ್ಷಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ತಿಳಿಸಿದರು.

ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ರವಿ.ಡಿ.ಚನ್ನಣ್ಣನವರ್ ಮಾತನಾಡಿ ಸಂರಕ್ಷಿತ ಮಕ್ಕಳನ್ನು ಮೈಸೂರಿನ ಬಾಪೂಜಿ ಮಕ್ಕಳ ಮನೆಯಲ್ಲಿ ನಾಲ್ಕು, ಮೇಲುಕೋಟೆ ಜನಪದ ಸೇವಾ ಟ್ರಸ್ಟ್ ನಲ್ಲಿ ಆರು, ಮಂಡ್ಯದ ವಿಕಸನ ಸಂಸ್ಥೆಯಲ್ಲಿ ಆರು ಮಕ್ಕಳನ್ನು ಪಾಲನೆ ಮತ್ತು ಪೋಷಣೆಗಾಗಿ ನೀಡಲಾಗಿದೆ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರದ ಎಸ್.ಮಹೇಶ್ ಅಲಿಯಾಸ್ ಶಿವಣ್ಣ (29), ಯರಗನಹಳ್ಳಿ ಸಿ.ವೆಂಕಟೇಶ್ ಅಲಿಯಾಸ್ ಚಿಕ್ಕಮಾದಶೆಟ್ಟಿ (38), ಮಂಡಿಮೊಹಲ್ಲಾದ ಅನುಷಾ (40), ಪಿರಿಯಾಪಟ್ಟಣ ಕೋಮಲಾಪುರದ ಮೋಹನ ಕೆ.ಎಂ.ಅಲಿಯಾಸ್ ಮಾಯಿಗೌಡ (26) , ಬನ್ನಿಮಂಟಪದ ಉಷಾ ಸಿ.ಜೆ (45), ಮಂಡಿಮೊಹಲ್ಲಾದ ರೇಣುಕಾ (41), ಪ್ರಾನ್ಸಿಸ್ ಸಿ.ಜೆ ಅಲಿಯಾಸ್.ಎಂ.ಜೋಸೆಫ್ (55)ನಸೀಮಾ, ಕೆ.ಆರ್. ರಸ್ತೆಯ ಮದನ್ ಲಾಲ್ ಅಲಿಯಾಸ್ ವರದಾಜಿ (44), ದಟ್ಟಗಳ್ಳಿಯ ರವಿಚಂದ್ರ ಅಲಿಯಾಸ್ ಸ್ಕಾಟ್ ರವಿ ಅಲಿಯಾಸ್ ಯೋಗೇಶ್ (24), ವಿದ್ಯಾನಗರದ ಎನ್. ಶಂಕರ್ (26), ಪಾಪಣ್ಣ ಲೇಔಟ್ ನ ಬಿ.ಅಶೋಕ್ ಅಲಿಯಾಸ್ ಸೂರ್ಯ (25) ಈ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ ಎಂದರು.

ಅವರಲ್ಲಿ ಪ್ರಮುಖ ಆರೋಪಿ ಉಷಾ ಸಿ.ಜೆ. ಕೇರಳದಲ್ಲೂ ಈ ರೀತಿ ಪ್ರಕರಣ ನಡೆಸಿದ್ದಾರೆ. ಕೆ.ಆರ್.ಆಸ್ಪತ್ರೆಯ ನಕಲಿ ಪ್ರಮಾಣಪತ್ರವನ್ನು ಸಿದ್ಧಪಡಿಸಿ, ಮಕ್ಕಳನ್ನು ಮಾರಾಟ ಮಾಡುತ್ತಿದ್ದರು. ಮದನಲಾಲ್ ಮಕ್ಕಳಿಲ್ಲದವರಿಗೆ ಮಕ್ಕಳನ್ನು ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆಯ ವೇಳೆ ತಿಳಿದುಬಂತು. ಆರೋಪಿಗಳಾದ ರವಿಚಂದ್ರ, ಅಶೋಕ, ಎನ್.ಶಂಕರ್ ರನ್ನು ತೀವ್ರವಿಚಾರಣೆಗೊಳಪಡಿಸಿದಾಗ ಮಕ್ಕಳ ಅಪಹರಣದ ಜೊತೆ ಮೈಸೂರು ನಗರದ ಕುವೆಂಪುನಗರ, ವಿಜಯನಗರ, ಸರಸ್ವತಿಪುರಂ, ನಜರಾಬಾದ್, ಉದಯಗಿರಿ, ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳವು, ಸುಲಿಗೆ ಸೇರಿದಂತೆ 2013ರಿಂದ ಇಲ್ಲಿಯವೆರೆಗೂ ಸುಮಾರು 13ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳು ಮೋಜು ಮಸ್ತಿಗಾಗಿ ಸುಲಭವಾಗಿ ಹಣ ಸಂಪಾದಿಸಲು ಕಳವು ಸುಲಿಗೆಪ್ರಕರಣಗಳನ್ನು ನಡೆಸಿರುವುದಾಗಿ ಒಪ್ಪಿಕೊಂಡಿದ್ದು ಆರೋಪಿಗಳಿಂದ 5 ಸುಲಿಗೆ ಪ್ರಕರಣ, 8 ಮನೆಗಳ್ಳತನ, ಸೇರಿ ಒಟ್ಟೂ 13ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿಸಿದರು. ಅವರಿಂದ 28 ಲಕ್ಷ ರೂ. ಮೌಲ್ಯದ 1 ಕೆ.ಜಿ. 284 ಗ್ರಾಂ ಚಿನ್ನದ ಆಭರಣಗಳು, 1 ಲಕ್ಷ ರೂ. ಮೌಲ್ಯದ ಅರ್ಧಕೆಜಿ ಬೆಳ್ಳಿಗಟ್ಟಿ, 12 ಲಕ್ಷ ರೂ. ಮೌಲ್ಯದ ನಾಲ್ಕು ಕಾರು, 1.5 ಲಕ್ಷ ರೂ. ಮೌಲ್ಯದ 3 ವಿವಿಧ ಕಂಪನಿಯ ಟಿವಿಗಳು, 50 ಸಾವಿರ ರೂ. ಮೌಲ್ಯದ ಒಂದು ಬೈಕ್ , 30 ಸಾವಿರದ ಒಂದು ಲ್ಯಾಪ್ ಟಾಪ್, 1 ಲಕ್ಷ ರೂ. ಮೌಲ್ಯದ ನಾಲ್ಕು ಮೊಬೈಲ್, 1 ಲಕ್ಷ ರೂ. ಮೌಲ್ಯದ 8 ಕಂಪನಿಯ ವಿವಿಧ ದುಬಾರಿ ವಾಚ್, 1.5 ಲಕ್ಷರೂ.ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 57ಲಕ್ಷರೂ.ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದರು.

ಯುಎಸ್‍ಎ, ಕೀನ್ಯಾಗೆ ಮಾರಾಟ: ನಂಜನಗೂಡಿನ ಒಂದು ಮಗುವನ್ನು ಅಪಹರಿಸಿದ್ದು ಬಿಟ್ಟರೆ ಉಳಿದ 15 ಮಕ್ಕಳು ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುಗಳು. ಪೋಷಕರಿಗೆ ಮಗು ಜನಿಸುವಾಗಲೇ ಸತ್ತು ಹೋಗಿದೆ ಎಂದು ಸುಳ್ಳು ಹೇಳಿ 1 ರಿಂದ 4 ಲಕ್ಷದ ವರೆಗೂ ಮಾರಾಟ ಮಾಡುತ್ತಿದ್ದರು. ಇದರಲ್ಲಿ ಪ್ರಮುಖವಾಗಿ ಅರವಿಂದ  ಆಸ್ಪತ್ರೆ ಹಾಗೂ ಅನುಷಾ ಎಂಬಾಕೆ ನಡೆಸುತ್ತಿದ್ದ ನಸೀಮಾ ಮೆಡಿಕಲ್ ಸೆಂಟರ್ ಭಾಗಿಯಾಗಿವೆ. ನಕಲಿ ದಾಖಲೆ ಸೃಷ್ಟಿಸಿ ಮೈಸೂರು, ಯುಎಸ್‍ಎ, ಕೀನ್ಯಾ, ಬೆಂಗಳೂರು, ಹಾಗೂ ಕೇರಳದಲ್ಲಿನ ತನ್ನ ಸಂಬಂಧಿಗಳಿಗೆ ಹಣ ಪಡೆದು ಮಾರಾಟ ಮಾಡಿರುವುದಾಗಿ ಬಂಧಿತ ಆರೋಪಿ ಅನುಷಾ ತಪ್ಪೊಪ್ಪಿಕೊಂಡಿದ್ದಾಳೆ.

ಮೂವರಿಗೆ ಪೊಲೀಸ್ ಆಫ್ ದಿ ಮಂಥ್ ಗೌರವ: ಪೊಲೀಸರ ಕಾರ್ಯ ಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಉತ್ತಮ ಕಾರ್ಯ ಮಾಡಿದ ಪೊಲೀಸರಿಗೆ ಪೊಲೀಸ್ ಆಫ್ ದಿ ಮಂಥ್ ಎಂಬ ವಿನೂತನ ಗೌರವ ನೀಡಲಾಗುತ್ತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಪಚ್ಚೇಗೌಡ, ಅಕ್ಟೋಬರ್‍ನಲ್ಲಿ ಪ್ರದೀಪ್ ಹಾಗೂ ನವೆಂಬರ್‍ನಲ್ಲಿ ಮನೋಹರ್ ಎಂಬುವವರಿಗೆ 5 ಸಾವಿರ ನಗದು ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಮಗು ವಾಪಸ್ ನೀಡಲು ನಕಾರ: ನಗರದ ಅನ್ಸುಲ್‍ ಗುಪ್ತ ಎಂಬುವರು ಕಳೆದ ಆರು ವರ್ಷಗಳ ಹಿಂದೆ ಮಗುವನ್ನು ಮಾರಾಟಗಾರರಿಂದ ಪಡೆದುಕೊಂಡಿದ್ದು ಪ್ರಕರಣ ಬೆಳಕಿಗೆ ಬಂದ ಬಳಿಕ ಪೋಷಕರಿಗೆ ಒಪ್ಪಿಸಲು ನಿರಾಕರಿಸುತ್ತಿದ್ದಾರೆ. ಆರು ವರ್ಷಗಳಿಂದ ಮಗುವನ್ನು ಸಾಕಿ ಸಲಹುತ್ತಿದ್ದೇನೆ. ಕಾನೂನಾತ್ಮಕವಾಗಿಯೇ ಮಗುವನ್ನು ಪಡೆದುಕೊಂಡಿದ್ದು ಯಾವುದೇ ಕಾರಣಕ್ಕೂ ವಾಪಸ್ ನೀಡುವುದಿಲ್ಲ ಎಂದು ವಾದಿಸುತ್ತಿರುವುದಲ್ಲದೆ ಪೊಲೀಸರಿಗೇ ಚಳ್ಳೇಹಣ್ಣು ತಿನ್ನಿಸಿ ನಾಪತ್ತೆಯಾಗಿದ್ದಾರೆ. ಅವರ ವಿರುದ್ಧ 164 ಸಿಆರ್‍ಸಿಪಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಮಾಗಳಿ ರವಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಎಸ್.ಎಲ್. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

sp-web-4ಸುದ್ದಿಗೋಷ್ಠಿಯಲ್ಲಿ ನಂಜನಗೂಡು ಎಎಸ್ಪಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಎಸ್ಪಿ ಕಲಾಕೃಷ್ಣಸ್ವಾಮಿ, ಡಿವೈಎಸ್ಪಿ ವಿಕ್ರಂ ಆಮ್ಟೆ ಉಪಸ್ಥಿತರಿದ್ದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ತಂಡಕ್ಕೆ ಒಂದು ಲಕ್ಷ ರೂ. ನಗದು ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ಇದೇ ಸಂದರ್ಭ ತ್ರೈಮಾಸಿಕ ಪ್ರಾಪರ್ಟಿ ರಿಟರ್ನ್ ಪರೇಡ್ ಹಮ್ಮಿಕೊಳ್ಳಲಾಗಿದ್ದು, ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಲಾಯಿತು.

ಪೊಲೀಸರ ಭರ್ಜರಿ ಬೇಟೆ

ಜಿಲ್ಲಾ ಪೊಲೀಸರು ಅಪರಾಧಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದು ಭರ್ಜರಿ ಬೇಟೆಯಾಡಿದ್ದಾರೆ. 2016ರ ನವೆಂಬರ್‍ವರೆಗೆ ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಲಕ್ಷಾಂತರ ರೂ. ಮೌಲ್ಯದ ನಗದು, ಚಿನ್ನಾಭರಣ, ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಟ್ಕಾ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿರುವ ಪೊಲೀಸರು 5655 ರೂ. ನಗದು 13 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಜೂಟಾಟಕ್ಕೆ ಸಂಬಂಧಿಸಿದಂತೆ 250 ಪ್ರಕರಣಗಳು ದಾಖಲಾಗಿದ್ದು, 1461 ಮಂದಿಯನ್ನು ಬಂಧಿಸಿದ್ದು, 1,99,3634 ರೂ. ನಗದು,  32 ಮೊಬೈಲ್, 71 ದ್ವಿಚಕ್ರ ವಾಹನ ಹಾಗೂ 95 ನಾಲ್ಕು ಚಕ್ರದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

sp-2-webಅಕ್ರಮ ಲಾಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಮಂದಿಯನ್ನು ಬಂಧಿಸಿದ್ದು, 4830 ರೂ. ನಗದು, ಕಂಪ್ಯೂಟರ್, 26 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದು, ಕ್ರಿಕೆಟ್ ಬೆಟಿಂಗ್‍ನಲ್ಲಿ ಮೂವರನ್ನು ಬಂಧಿಸಿರುವ ಪೊಲೀಸರು 4500 ರೂ. ನಗದು, 5 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ 474 ಪ್ರಕರಣದಲ್ಲಿ 430 ಮಂದಿಯನ್ನು ಬಂಧಿಸಿ 57472 ರೂ. ನಗದು ಹಾಗೂ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Reply

comments

Related Articles

error: