
ಕರ್ನಾಟಕ
ರಸ್ತೆ ಕಾಮಗಾರಿ ಕೈಗೊಳ್ಳದಿದ್ದರೆ, ಮಕ್ಕಳಿಂದ ಪಿಡಬ್ಲ್ಯೂಡಿ ಕಚೇರಿಗೆ ಮುತ್ತಿಗೆ ಬೆದರಿಕೆ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
ರಾಜ್ಯ(ಮಡಿಕೇರಿ)ಏ.17:- ಸೋಮವಾರಪೇಟೆಯ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮನೆಕೊಪ್ಪ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಈ ಬಾರಿ ಮತದಾನ ಬಹಿಷ್ಕರಿಸುವದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ದೊಡ್ಡಮನೆಕೊಪ್ಪ ಗ್ರಾಮದ ರಸ್ತೆಗಳು ಹೊಂಡ ಬಿದ್ದು ವರ್ಷಗಳೆ ಕಳೆದಿವೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿ ಗ್ರಾಮಸ್ಥರು ತೀರ್ಮಾನ ತೆಗದುಕೊಂಡ ನಂತರ ಗ್ರಾಮಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ, ಮತದಾನದಲ್ಲಿ ಪಾಲ್ಗೊಳ್ಳಿ, ಕೆಲ ದಿನಗಳಲ್ಲೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸುಳ್ಳು ಭರವಸೆ ನೀಡಿ ಹೋದವರು ಇದುವರಗೆ ಗ್ರಾಮದ ಕಡೆಗೆ ಬಂದಿಲ್ಲ ಎಂದು ಸಬ್ಬಮ್ಮ ದೇವಿ ಉತ್ಸವ ಸಮಿತಿ ಅಧ್ಯಕ್ಷ ರಾಜ್ಗೋಪಾಲ್ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ 3 ಕಿ.ಮೀ. ರಸ್ತೆ ಗುಂಡಿಬಿದ್ದಿದ್ದು, ವಾಹನಗಳ ಸಂಚಾರಕ್ಕೆ ಅಯೋಗ್ಯವಾಗಿದೆ. ಶಾಲಾ ಕಾಲೇಜು ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಅನುದಾನ ಕೋರಿ ಶಾಸಕರು, ತಾ.ಪಂ., ಜಿ.ಪಂ., ಸೇರಿದಂತೆ ಅಧಿಕಾರಿಗಳ ಗಮನ ಸೆಳೆದಿದ್ದರೂ ಯಾವದೇ ಪ್ರಯೋಜವಾಗಿಲ್ಲ. ಈ ಹಿನ್ನೆಲೆ ವಿಧಾನಸಭಾ ಚುನಾವಣೆಯ ಮತದಾನವನ್ನು ಬಹಿಸ್ಕರಿಸುವದಾಗಿ ತಿಳಿಸಿದರು.
ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳಿಗೆ ಟೆಂಡರ್ ಆಗಿದ್ದು, ಗುತ್ತಿಗೆ ಪಡೆದಿರುವ ಜಯರಾಂ ಎಂಬವರು ಕಾಮಗಾರಿ ಪ್ರಾರಂಭಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮದ ಮಕ್ಕಳನ್ನು ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲೇ ಉಳಿಸಬೇಕಾಗುತ್ತದೆ ಎಂದರು. ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಿಂದೆ ಬೋರ್ವೆಲ್ ತೆಗೆದು, ಮೋಟಾರ್ ಅಳವಡಿಸಿದ್ದರೂ ಇಂದಿಗೂ ಪಂಚಾಯಿತಿ ವಶಕ್ಕೆ ಒಪ್ಪಿಸಿಲ್ಲ. ಮುಂದಿನ 10 ದಿನಗಳ ಒಳಗೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಗ್ರಾಮದ ಪ್ರಮುಖರಾದ ಟಿ.ಎಂ. ದಿಲೀಪ್, ಡಿ.ಬಿ. ಚಂದ್ರಶೇಖರ್, ಕುಶಾಲಪ್ಪ, ಡಿ.ಎನ್. ಪ್ರಸನ್ನ, ಡಿ.ಜಿ. ಚಂದ್ರಶೇಖರ್ ಅವರುಗಳು ಇದ್ದರು. (ಕೆಸಿಐ,ಎಸ್.ಎಚ್)