ಕರ್ನಾಟಕಪ್ರಮುಖ ಸುದ್ದಿ

ಕುಡುಕರಿಗೂ ತಟ್ಟಿದ ಚುನಾವಣಾ ಬಿಸಿ: ಇಂತಿಷ್ಟೆ ಮದ್ಯ ಮಾರಾಟವೆಂಬ ಬೋರ್ಡ್’ಗಳ ದರ್ಶನ!

ಬೆಂಗಳೂರು (ಏ.17): ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಎಚ್ಚರವಹಿಸಲು ಚೂನಾವಣಾ ಆಯೋಗ ಈ ಬಾರಿ ಕುಡುಕರ ಮೇಲೂ ಕಣ್ಣಿಟ್ಟಿದೆ. ಒಬ್ಬ ವ್ಯಕ್ತಿಗೆ ಇಂತಿಷ್ಟೇ ಮದ್ಯ ಮಾರಾಟ ಮಾಡಬೇಕೆಂಬ ನಿಯಮ ವಿಧಿಸಿರುವುದರಿಂದ ಚುನಾವಣಾ ನೀತಿ ಸಂಹಿತೆಯ ಬಿಸಿ ಕುಡುಕರಿಗೂ ತಟ್ಟಿದೆ.

ಅಬಕಾರಿ ಇಲಾಖೆ ಅಕ್ರಮ ಮದ್ಯ ದಾಸ್ತಾನು ಮತ್ತು ಸಾಗಣೆಗೆ ಕಡಿವಾಣ ಹಾಕುವ ಉದ್ದೇಶದಿಂದ ಎಲ್ಲ ಅಬಕಾರಿ ಜಿಲ್ಲಾಧಿಕಾರಿಗಳಿಗೆ ಮಾಮೂಲಿಗಿಂತ ಹೆಚ್ಚಿನ ಮದ್ಯ ಪೂರೈಕೆಯನ್ನು ನಿಯಂತ್ರಿಸಬೇಕೆಂದು ಸೂಚಿಸಿದೆ. ಇದರಂತೆ ಒಬ್ಬ ವ್ಯಕ್ತಿ ದಿನಕ್ಕೆ 750 ಎಂಎಲ್ ಮದ್ಯ ಅಥವಾ ಮೂರು ಬಾಟಲ್ ಬಿಯರ್ ಅಷ್ಟೇ ಖರೀದಿಸಬಹುದು.

ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ದಿನಕ್ಕೆ ಇಷ್ಟೇ ಮದ್ಯ ನೀಡುವುದು ಎಂಬ ಫಲಕ ಹಾಕಲಾಗಿದೆ. ವಿಜಯಪುರ, ಬಾಗಲಕೋಟೆ, ಮತ್ತಿತರೆ ರೆಸ್ಟೋರೆಂಟ್ ಗಳಲ್ಲಿ ಇಂತಹ ಫಲಕಗಳು ಹೆಚ್ಚಾಗಿ ಕಾಣುತ್ತವೆ.

ವಿಧಾನಸಭಾ ಚುನಾವಣೆ ಪ್ರಯುಕ್ತ ಮದ್ಯ ಮಾರಾಟವನ್ನು ಕಡಿತ ಮಾಡಲಾಗುತ್ತಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ. ಒಬ್ಬರಿಗೆ 750 ಎಂಎಲ್ ಮಾತ್ರ ಇಲ್ಲವೇ 375 ಎಂಎಲ್ ಎರಡು ಸಲ, 180 ಎಂಎಲ್ ತೆಗೆದುಕೊಂಡರೆ ನಾಲ್ಕು ಸಲ ಅಥವಾ 90 ಎಂಎಲ್ ಆದರೆ 8 ಸಲ ಮಾತ್ರ ನೀಡಲಾಗುವುದು ಎಂದು ಫಲಕವನ್ನು ಅಳವಡಿಸಲಾಗಿದೆ.

ಮೌಖಿಕ ಆದೇಶಕ್ಕೆ ಬೆದರಿದ ಬಾರ್ ಮಾಲೀಕರು!

ಕುಡಿತಕ್ಕೆ ಮಿತಿ ಹೇರುವ ಅಬಕಾರಿ ಇಲಾಖೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಹಾಗೆ ಹೊರಡಿಸಲು ನಿಯಮಗಳಲ್ಲಿ ಅವಕಾಶವೇ ಇಲ್ಲ. ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ಮದ್ಯ ಸಾಗಣೆ ಮತ್ತು ದಾಸ್ತಾನಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಅಬಕಾರಿ ಇಲಾಖೆಗೆ ತಾಕೀತು ಮಾಡಿರುವ ಕಾರಣ ಬಾರ್’ಗಳು ಈ ಕ್ರಮಕ್ಕೆ ಮುಂದಾಗಿವೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: