ಮೈಸೂರು

ಇರ್ವಿನ್ ರಸ್ತೆ ಅಗಲೀಕರಣಕ್ಕೆ ವಿರೋಧ: ಏಕಮುಖ ಸಂಚಾರಕ್ಕೆ ಒತ್ತಾಯ

ಸುಗಮ ಸಂಚಾರದ ಹಿನ್ನೆಲೆಯಲ್ಲಿ ಮೈಸೂರಿನ ಹೃದಯ ಭಾಗವಾದ ಇರ್ವಿನ್ ರಸ್ತೆ ಅಗಲೀಕರಣಕ್ಕೆ ಸಿದ್ಧವಾಗಿದ್ದು ಇದರಿಂದ ಸ್ಥಳೀಯ ನಿವಾಸಿಗಳಿಗೆ, ವ್ಯಾಪಾರಿಗಳಿಗೆ ಹಾಗೂ ಪಾದಾಚಾರಿಗಳಿಗೆ ತೊಂದರೆಯುಂಟಾಗಲಿದೆ. ಹಾಗಾಗಿ ಈ ಯೋಜನೆಯನ್ನು ಕೈಬಿಡಬೇಕೆಂದು ಇರ್ವಿನ್ ರಸ್ತೆ ಅಗಲೀಕರಣ ವಿರೋಧಿ ಸಮಿತಿಯ ಪ್ರಸಾದ್ ನರ್ಸಿಂಗ್ ಹೋಮ್‍ನ ಡಾ.ಮಹೇಶ್‍ ಕುಮಾರ್ ಒತ್ತಾಯಿಸಿದರು.

ಅವರು, ಗುರುವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇರ್ವಿನ್ ರಸ್ತೆ ಅಗಲೀಕರಣದಿಂದ ಪಾರಂಪರಿಕ ಕಟ್ಟಡಗಳಾದ ವೆಲಿಂಗ್ಟನ್ ಲಾಜ್, ಜುಮಾ ಮಸೀದಿ, ಕಾಳಮ್ಮ ದೇವಸ್ಥಾನ ಹಾಗೂ ಇತರೆ ಕಟ್ಟಡಗಳು ಹಾನಿಗೊಳಗಾಗಿ ಲಾಭಕ್ಕಿಂತ ನಷ್ಟವೇ ಹೆಚ್ಚು ಸಂಭವಿಸುವುದು. ಹೆಚ್ಚಿನ ಲಾಭವಿಲ್ಲದ ಈ ಯೋಜನೆಯಿಂದ ಸಾರ್ವಜನಿಕ ತೆರಿಗೆ ಹಣ ಪೋಲಾಗಿ ತಾತ್ಕಾಲಿಕ ಪರಿಹಾರದಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುವುದು. ಅದರ ಬದಲಾಗಿ ಏಕಮುಖ ರಸ್ತೆಯನ್ನು ಮಾಡುವುದರಿಂದ ವಾಹನಗಳು ಸುಗಮವಾಗಿ ಸಂಚರಿಸಿ ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಮೂರುಪಟ್ಟು ಹೆಚ್ಚಿನ ವಾಹನದಟ್ಟಣೆ ಇರುತ್ತದೆ. ಅಂತಹ ಸಮಯವನ್ನೇ ಏಕಮುಖ ರಸ್ತೆ ಮೂಲಕ ನಿಭಾಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದು, ಅದೇ ರೀತಿಯಲ್ಲಿಯೇ ಮುಂದುವರೆಯಲಿ. ಅಗಲೀಕರಣದಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು. ಅಂತರ – ನಗರ ಬಸ್ ನಿಲ್ದಾಣವನ್ನು ಸಾತಗಳ್ಳಿಯ ನೂತನ ಬಸ್ ನಿಲ್ದಾಣಕ್ಕೆ ಕೇಂದ್ರ ಬಸ್ ನಿಲ್ದಾಣವನ್ನು ನಗರದ ಮಧ್ಯಭಾಗಕ್ಕೆ ಸ್ಥಳಾಂತರಿಸಿದರೆ ಸಮಸ್ಯೆಯು ಬಹುಪಾಲು ಕಮ್ಮಿಯಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ಪಾಲಿಕೆಗೆ ತಿಳಿಸಲಾಗಿದೆ. ಬೆಂಗಳೂರಿನ ಕಿರಿದಾದ ರಸ್ತೆ ಹೊಂದಿರುವ ವ್ಯಾಪಾರ ಕೇಂದ್ರ ಭಾಗವಾದ ಬಳೇಪೇಟೆ, ಚಿಕ್ಕಪೇಟೆ ಹಾಗೂ ಕಮರ್ಷಿಯಲ್ ಸ್ಟ್ರೀಟ್ ರಸ್ತೆಗಳ ಅಗಲೀಕರಣಗೊಳಿಸಲು ವ್ಯಾಪಾರಿಗಳು ಬಿಟ್ಟಿಲ್ಲ. ಅಂತಹ ಸ್ಥಳಗಳಲ್ಲಿ ಮೊದಲು ರಸ್ತೆ ಅಗಲೀಕರಣವಾಗಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪಿ.ಆರ್. ಸೋಮಣ್ಣ ಹಾಗೂ ಸಂದೀಪ್ ಮಾಳನಿಯ ಇದ್ದರು.

Leave a Reply

comments

Related Articles

error: