
ಪ್ರಮುಖ ಸುದ್ದಿ
ಸ್ಮೃತಿ ಇರಾನಿ ಜೊತೆ ಅಸಭ್ಯ ವರ್ತನೆ ಪ್ರಕರಣ : ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಚಾರ್ಜ್ ಶೀಟ್
ದೇಶ(ನವದೆಹಲಿ)ಏ.17:- ಕುಡಿದ ಮತ್ತಿನಲ್ಲಿ ದೆಹಲಿ ವಿಶ್ವವಿದ್ಯಾಲಯದ 4 ವಿದ್ಯಾರ್ಥಿಗಳು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಕಾರನ್ನು ಫಾಲೋ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ರಾಷ್ಟ್ರರಾಜಧಾನಿ ದೆಹಲಿಯ ಚಾಣಕ್ಯಪುರಿಯಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಏನಿದು ಪ್ರಕರಣ : 2017ರ ಏಪ್ರೀಲ್ 1ರ ಶನಿವಾರ ಸಂಜೆ ಸುಮಾರು 5 ಗಂಟೆ ವೇಳೆಯಲ್ಲಿ ಸ್ಮೃತಿ ಇರಾನಿ ಅವರ ಭದ್ರತಾ ಸಿಬ್ಬಂದಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ಈ ನಾಲ್ವರು ಯುವಕರು ಕಾರನ್ನು ಫಾಲೋ ಮಾಡಿ, ಮ್ಯಾನ್ಮಾರ್ ರಾಯಭಾರ ಕಚೇರಿ ಬಳಿ ಪೈಲಟ್ ಕಾರನ್ನು ಓವರ್ಟೇಕ್ ಮಾಡಲು ಯತ್ನಿಸಿದ್ದಾಗಿ ಹೇಳಿದ್ದರು. ನಾಲ್ವರು ಯುವಕರಾದ ಆನಂದ್ ಶರ್ಮಾ, ಅವಿನಾಶ್, ಶಿತಾಂಶು ಹಾಗೂ ಕುನಾಲ್ 20 ರಿಂದ 25ರ ವಯಸ್ಸಿನವರಾಗಿದ್ದು, ಎಲ್ಲರೂ ಮದ್ಯಪಾನ ಮಾಡಿದ್ದರು. ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬರುತ್ತಿದ್ದರು. ಮೊದಲಿಗೆ ಎಲ್ಲರನ್ನೂ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು. ನಂತರ ಮಹಿಳೆಯ ಕಾರು ಹಿಂಬಾಲಿಸಿ, ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಯುವಕರನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಅತೀ ವೇಗದ ಚಾಲನೆ, ಕುಡಿದು ವಾಹನ ಚಾಲನೆ ಮಾಡಿರುವುದು ಮತ್ತು ಸಚಿವೆ ಹಾಗೂ ಅವರ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ ಮಾಡಿರುವ ಕಾರಣ ಯುವಕರನ್ನು ಬಂಧಿಸಲಾಗಿತ್ತು. ಯುವಕರು ಮದ್ಯಪಾನ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿತ್ತು. ಇವರೆಲ್ಲಾ ಸ್ನೇಹಿತರೊಬ್ಬರ ಬರ್ತ್ ಡೇ ಪಾರ್ಟಿ ಮುಗಿಸಿ ಬರುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
ಸಚಿವೆಯ ಕಾರನ್ನು ಪದೇ ಪದೇ ಓವರ್ ಟೇಕ್ ಮಾಡಲು ಪ್ರಯತ್ನಿಸಿದಾಗ ಸ್ಮೃತಿ ಇರಾನಿ ಅವರ ಭದ್ರತಾ ಸಿಬ್ಬಂದಿ, ಫ್ರೆಂಚ್ ರಾಯಭಾರ ಕಚೇರಿ ಬಳಿ ಯುವಕರ ಕಾರನ್ನು ತಡೆದಿದ್ದರು. ನಂತರ ಪೊಲೀಸ್ ಕಂಟ್ರೋಲ್ ರೂಮ್ ವ್ಯಾನ್ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದಿದ್ದು, ಅವರಿಗೆ ಯುವಕರನ್ನು ಒಪ್ಪಿಸಲಾಗಿತ್ತು. ನಾಲ್ವರು ಯುವಕರಿಗೆ ಜಾಮೀನು ಕೂಡ ಸಿಕ್ಕಿತ್ತು. ಭಾರತೀಯ ದಂಡ ಸಂಹಿತೆ ಕಾಯ್ದೆಯಡಿ ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು. (ಎಸ್.ಎಚ್)