ಮೈಸೂರು

ಲಯನ್ಸ್ ಕ್ಲಬ್ ಶತಮಾನೋತ್ಸವ ಸಂಭ್ರಮಾಚರಣೆ: ದತ್ತಿನಿಧಿ ಸಂಗ್ರಹ

ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಶತಮಾನೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್‍ ಪಶ್ಚಿಮ ವಲಯದಿಂದ ಎರಡು ದಿನಗಳ ಮಾನಸಿಕ, ದೈಹಿಕ ಮತ್ತು ಯೋಗಕ್ಷೇಮದ ಬೃಹತ್ ಮೇಳವನ್ನು ಆಯೋಜಿಸಲಾಗಿದೆ ಎಂದು ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಎಂ.ಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು, ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಿ.3 ಮತ್ತು 4ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಡಿ.3ರ ಬೆಳಗ್ಗೆ 6.30ಕ್ಕೆ ಅಭಿನೇತ್ರಿ ಪ್ರಿಯಾಂಕಾ ರಾವ್ ಚಾಲನೆ ನೀಡುವರು. ವೈದ್ಯಕೀಯ ತಪಾಸಣೆ, ಮಹಿಳೆಯರಿಗೆ ಮೂಳೆ ಸಾಂದ್ರತೆ ಪರೀಕ್ಷೆ, ಝಂಬಾ ಕಾರ್ಯಾಗಾರ, ಯೋಗ ತರಬೇತಿ, ಸಾವಯುವ ಆಹಾರೋತ್ಪನ್ನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

5 ಕಿಮೀ ಆರೋಗ್ಯ ನಡಿಗೆ ಹಾಗೂ ಓಟಕ್ಕೆ ಡಿ.4ರ ಬೆಳಗ್ಗೆ 6ಕ್ಕೆ ಶಾಸಕ ವಾಸು ಚಾಲನೆ ನೀಡುವರು. ಸಂಜೆ 6ಕ್ಕೆ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮವನ್ನುಡಾ.ಸುಕನ್ಯಾ ಪ್ರಭಾಕರ್ ಉದ್ಘಾಟಿಸುವರು. ವಿದುಷಿ ನಾಗಲಕ್ಷ್ಮಿ ನಾಗರಾಜನ್ ಅವರ ಭರತನಾಟ್ಯ ಕಾರ್ಯಕ್ರಮ ಹಾಗೂ ಗಾಯಕ ಶ್ರೀಹರ್ಷದಿಂದ ವಾದ್ಯಗೋಷ್ಠಿಯಿದೆ.

ಕಾರ್ಯಕ್ರಮಕ್ಕೆ ಪ್ರವೇಶದರವನ್ನು ನಿಗದಿ ಮಾಡಲಾಗಿದ್ದು ಬರುವ ಮೊಬಲಗನ್ನು ಮೂತ್ರಪಿಂಡ ದತ್ತಿ ನಿಧಿಗೆ ಬಳಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ತ್ರಿನೇಶ್ 0821-2511254 ಇವರನ್ನು ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಡಾ.ವೇಣು ಎಂ.ವಿ, ಮಹೇಶ್ ರಾವ್ ಕೆ. ಅಲಿವಾಘ್ ಹಾಗೂ ಮುಕುಂದ ಉಪಸ್ಥಿತರಿದ್ದರು.

Leave a Reply

comments

Related Articles

error: