
ಮೈಸೂರು
ವಿಶ್ವ ಏಡ್ಸ್ ದಿನದಂಗವಾಗಿ ಜೆಎಸ್ಎಸ್ ನರ್ಸಿಂಗ್ ಕಾಲೇಜಿನಿಂದ ರ್ಯಾಲಿ
ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣಾ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾಮಾಜಿಕ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಜೆಎಸ್ಎಸ್ ನರ್ಸಿಂಗ್ ಕಾಲೇಜು ವಿಶ್ವ ಏಡ್ಸ್ ದಿನದಂಗವಾಗಿ ಗುರುವಾರದಂದು ರ್ಯಾಲಿಯನ್ನು ಆಯೋಜಿಸಿತ್ತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ರ್ಯಾಲಿಗೆ ಚಾಲನೆ ನೀಡಿದರು. ನರ್ಸಿಂಗ್ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸ್ವಯಂಸೇವಕರು ಏಡ್ಸ್ ಬರದಂತೆ ತಡೆಗಟ್ಟುವ ವಿಧಾನಗಳು ಮತ್ತು ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಮಹಾತ್ಮ ಗಾಂಧಿ ರಸ್ತೆ, ಅಗ್ರಹಾರ ರಸ್ತೆ, ಪಾಠಶಾಲಾ ವೃತ್ತ, ಜೆಎಸ್ಎಸ್ ವಿಶ್ವವಿದ್ಯಾಲಯ ಕಟ್ಟಡ ಮಾರ್ಗವಾಗಿ ತೆರಳಿದ ಜಾಥಾ ರಾಜೇಂದ್ರ ಭವನದ ಬಳಿ ಕೊನೆಗೊಂಡಿತು. ಮೈಸೂರು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಂದ ಗುರುವಾರ ಬೆಳಗ್ಗೆ ಕೆ.ಆರ್. ಆಸ್ಪತ್ರೆ ಆವರಣದಲ್ಲಿ ಜಾಥಾ ನಡೆಯಿತು.
ರ್ಯಾಲಿಗೆ ಚಾಲನೆ ನೀಡಿದ ಬಳಿಕ ಡಾ. ಬಸವರಾಜು ಅವರು ಮಾತನಾಡಿ, ಏಡ್ಸ್ ಅಸುರಕ್ಷಿತ ಲೈಂಗಿಕತೆಯಿಂದ ಹರಡುತ್ತದೆ. ತಾಯಿಗೆ ಏಡ್ಸ್ ಇದ್ದಲ್ಲಿ ಗರ್ಭಾವಸ್ಥೆಯಲ್ಲಿರುವ ಮಗುವಿಗೆ ರಕ್ತದ ಮೂಲಕ ಏಡ್ಸ್ ಹರಡುತ್ತದೆ. ಇದರ ಲಕ್ಷಣಗಳು ಕೂಡಲೇ ಗೋಚರಿಸುವುದಿಲ್ಲ. ಏಡ್ಸ್ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸುವರ್ಣ, ಜೆಎಸ್ಎಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಪ್ರೊ. ಶೀಲಾ ವಿಲಿಯಮ್ಸ್, ಡಾ. ರಘುಕುಮಾರ್ ಟಿ. ಮತ್ತಿತರರು ಉಪಸ್ಥಿತರಿದ್ದರು.