ಕರ್ನಾಟಕ

`ಕಲಿಕೆಗೊಂದು ವೇದಿಕೆ’ ಬೇಸಿಗೆ ಶಿಬಿರ: ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ 

ಮಡಿಕೇರಿ,ಏ.17-ಬೇಸಿಗೆ ಶಿಬಿರವು ಮಕ್ಕಳ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಬೆಳವಣಿಗೆಗೆ ಉತ್ತಮ ವೇದಿಕೆಯಾಗಿದೆ ಎಂದು ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಬಾಲಕಿಯರ ಬಾಲಮಂದಿರದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ `ಕಲಿಕೆಗೊಂದು ವೇದಿಕೆ’ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ಪರೀಕ್ಷೆ ಮುಗಿದ ನಂತರ ಮನೆಯಲ್ಲಿ ಕಾಲಹರಣ ಮಾಡದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿರುವ ಬೇಸಿಗೆ ಶಿಬಿರದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.

ಜಿಲ್ಲಾ ಆಗ್ನಿಶಾಮಕ ಅಧಿಕಾರಿ ಚಂದನ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ನೀರಿನ ರಕ್ಷಣೆ ಬಗ್ಗೆ ಮಕ್ಕಳಿಗೆ ತಿಳಿಸಿ, ಬೆಂಕಿಯಿಂದ ಆಗುವ ಅನಾಹುತಗಳ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ರಕ್ಷಣೆ ಬಗ್ಗೆ ಮತ್ತು ಪ್ಲಾಸ್ಟಿಕ್‍ನಿಂದ ಪರಿಸರಕ್ಕೆ ಉಂಟಾಗುವ ಅನಾಹುತಗಳ ಬಗ್ಗೆ, ಕಸವನ್ನು ಬೇರ್ಪಡಿಸಿ ಮರು ಬಳಕೆ ವಸ್ತುಗಳನ್ನಾಗಿ ಪರಿವರ್ತಿಸಿ ಬಳಸುವ ಬಗ್ಗೆ, ಗೊಬ್ಬರವನ್ನಾಗಿ ಮಾಡಿ ಗಿಡ ಮರಗಳಿಗೆ ಉಪಯೋಗಿಸಿ ಎಂದು ಹೇಳಿದರು.

ನೀನಾಸಂ ಕಲಾವಿದ ಸುನೀಲ್ ಮಾತನಾಡಿ ಶಿಬಿರದಲ್ಲಿ ಓದಿನ ಬಗ್ಗೆ ಹಾಡು, ಕುಣಿತ, ನಾಟಕ ಮತ್ತಿತರ ಕಲಿಕೆಗಳನ್ನು ಹೇಳಿ ಕೊಡಲಾಗುವುದು ಹಾಗೂ ಕಸದಿಂದ ಆಗುವ ಕಲೆಗಳ ಬಗ್ಗೆ ತಿಳಿಸಿ, ಮಕ್ಕಳಿಗೆ ಚಿತ್ರಕಲೆ, ಸಂಗೀತ ಮತ್ತು ಇಷ್ಟವಾದ ಕಲಿಕೆಗಳ ಬಗ್ಗೆ ತಿಳಿಸಿಕೊಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕರ ಬಾಲಮಂದಿರ, ಬಾಲಕಿಯರ ಬಾಲಮಂದಿರ, ಕಾವೇರಿ ಮಕ್ಕಳ ಗೃಹ, ಮಡಿಕೇರಿ ಹಾಗೂ ವಿವಿಧ ಶಾಲೆಯ ಮಕ್ಕಳು ಹೀಗೆ ಒಟ್ಟು 110 ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ರ, ಯೋಗ, ಕಸದಿಂದ ರಸ, ವ್ಯಕ್ತಿತ್ವ ವಿಕಸನ ಹೀಗೆ ಹಲವು ರೀತಿಯ ಚಟುವಟಿಕೆಗಳು ಇರಲಿವೆ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಾಮ್ತಾಜ್, ಕೆ.ಎಲ್.ಪ್ರಿಯ, ಸಜಿತ್, ಹರೀಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಬಾಲಕಿಯರ ಬಾಲಮಂದಿರ ಹಾಗೂ ಬಾಲಕರ ಬಾಲಮಂದಿರದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಭಾವತಿ ಅವರು ವಂದಿಸಿದರು. (ಕೆಸಿಐ, ಎಂ.ಎನ್)

Leave a Reply

comments

Related Articles

error: