
ಮೈಸೂರು
ಅರ್ಧಕ್ಕೆ ನಿಂತ ಮೈಸೂರು-ಹುಣಸೂರು ರಸ್ತೆ ಕಾಮಗಾರಿ : ವಕೀಲರಿಂದ ರಾಜ್ಯಪಾಲರಿಗೆ ಪತ್ರ
ಮೈಸೂರು,ಏ.19:- ಮೈಸೂರು-ಹುಣಸೂರು ರಸ್ತೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ವಾಹನಸವಾರರು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ವಕೀಲರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಇಲ್ಲಿನ ಕಲಾಮಂದಿರದ ಮುಂಭಾಗದ ರಸ್ತೆಯಿಂದ ಆದಿಚುಂಚನಗಿರಿ ವಿದ್ಯಾರ್ಥಿನಿಲಯ ರಸ್ತೆಯವರೆಗಿನ ರಸ್ತೆಯನ್ನು ನೇರ ರಸ್ತೆ ಮಾಡುವುದಾಗಿ ನಾಲ್ಕೈದು ತಿಂಗಳ ಹಿಂದೆಯೇ ಕಾಮಗಾರಿ ಪ್ರಾರಂಭಿಸಲಾಗಿತ್ತು. ಆದರೆ ಇದುವರೆಗೂ ಕಾಮಗಾರಿ ಮುಗಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಮಾರ್ಗವಾಗಿ ತೆರಳುವ ಕೊಡಗು,ಹಾಸನ ಪ್ರಯಾಣಿಕರಿಗೆ, ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗಿದೆ. ಸುಮಾರು 13ಕೋ.ರೂ.ವೆಚ್ಚದಲ್ಲಿ ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ಕಾಮಗಾರಿಯನ್ನು ಆರಂಭಿಸಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಅವರು ದೂರಿದ್ದಾರೆ. ಕಾಮಗಾರಿ ಸ್ಥಗಿತಗೊಂಡಿದ್ದು ಕೂಡಲೇ ಸಮಬಂಧಪಟ್ಟವರು ಕಾಮಗಾರಿಯನ್ನು ಮುಗಿಸಿ, ಸಾರ್ವಜನಿಕರ ಸಂಚಾರಕ್ಕೆ ಈ ರಸ್ತೆಯನ್ನು ಮುಕ್ತ ಮಾಡಿಕೊಡಬೇಕು ಎಂದು ವಕೀಲರಾದ ಹರದೂರು ಜವರೇಗೌಡ ಮತ್ತು ಪಡುವಾರಹಳ್ಳಿ ಎಂ.ರಾಮಕೃಷ್ಣ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)