
ದೇಶಪ್ರಮುಖ ಸುದ್ದಿ
ಆಸ್ಪತ್ರೆಯಿಂದ ಹಸುಳೆ ಅಪಹರಣ: ಗಂಟೆಯೊಳಗೆ ಚಾಲಾಕಿ ಕಳ್ಳಿಯರ ಪತ್ತೆಹಚ್ಚಿದ ಪೊಲೀಸರು!
ಹೊಸದಿಲ್ಲಿ (ಎ.19): ರಾಷ್ಟ್ರ ರಾಜಧಾನಿಯ ಲಾಲ್ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯಿಂದ ಅಪಹರಿಸಲ್ಪಟ್ಟಿದ್ದ ಒಂದು ತಿಂಗಳ ಹಸುಳೆಯನ್ನು ಗಂಟೆಯೊಳಗೆ ಪೋಷಕರಿಗೆ ವಾಪಸ್ ಮಾಡಿ ಪೊಲೀಸರು ಕರ್ತವ್ಯಪ್ರಜ್ಞೆ ಮೆರೆದ ಘಟನೆ ಏ.17ರಂದು ನಡೆದಿದೆ.
ಒಂದು ತಿಂಗಳ ಮಗುವನ್ನು ಅಪಹರಿಸಲಾಗಿದೆ ಎಂದು ಪೊಲೀಸರಿಗೆ ಕರೆ ಬಂತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಒಂದು ಗಂಟೆಯಲ್ಲಿ ಮಗುವನ್ನು ಪತ್ತೆ ಹಚ್ಚಿ ಕಳ್ಳಿಯರನ್ನು ಬಂಧಿಸಿದ್ದಾರೆ. ಅಪಹರಣ ಸುದ್ದಿ ತಿಳಿದ ತಕ್ಷಣ ಪೊಲೀಸರು ಆಸ್ಪತ್ರೆಗೆ ಧಾವಿಸಿದರು. ನಾನು ಸರದಿಯಲ್ಲಿ ನಿಂತಿದ್ದಾಗ, ಪತ್ನಿಯ ಜತೆ ಸ್ನೇಹ ಬೆಳೆಸಿದ ಮಹಿಳೆಯೊಬ್ಬಳು ಹೆಣ್ಣುಮಗುವನ್ನು ಅಪಹರಿಸಿದಳು ಎಂದು ಮಗುವಿನ ತಂದೆ ಸುಮಿತ್ ಅವರು ಪೊಲೀಸರಿಗೆ ವಿವರ ನೀಡಿದರು. ಆ ಮಹಿಳೆ ಶಿಶುವಿನ ತಾಯಿಯಂತೆ ನಟಿಸಿ ಮಗುವನ್ನು ಅಪಹರಿಸಿ, ಪರಾರಿಯಾಗಿದ್ದಳು.
ಪ್ರಕರಣದ ಸೂಕ್ಷ್ಮತೆ ಹಿನ್ನೆಲೆಯಲ್ಲಿ ಪೊಲೀಸರು ನಾಲ್ಕು ತಂಡಗಳನ್ನು ತಕ್ಷಣ ರಚಿಸಿದರು. ಶಿಶು ಅಥವಾ ಅಪಹರಣ ಮಾಡಿದ ಮಹಿಳೆಯ ಪತ್ತೆಗೆ ಜಾಲ ಹೆಣೆದರು. ಆಸ್ಪತ್ರೆಯ ಪ್ರವೇಶ ಮತ್ತು ನಿರ್ಗಮನ ದ್ವಾರದಲ್ಲಿ ಆಸ್ಪತ್ರೆ ಸಿಬ್ಬಂದಿಯನ್ನೂ ನಿಯೋಜಿಸಿ, ಚಲನ ವಲನಗಳ ಮೇಲೆ ನಿಗಾ ಇಡುವಂತೆ ಸೂಚಿಸಿದರು. ಒಂದು ತಂಡವನ್ನು ಸಿಸಿಟಿವಿ ದೃಶ್ಯಾವಳಿ ಮೇಲೆ ನಿಗಾ ಇಡಲು ನಿಯೋಜಿಸಲಾಯಿತು. ತಕ್ಷಣ ಮಹಿಳೆ, ಒಂದು ನಿರ್ಗಮನ ದ್ವಾರದತ್ತ ಹೋಗುತ್ತಿರುವುದು ಕಂಡುಬಂತು. ಆಟೊರಿಕ್ಷಾವೊಂದರಲ್ಲಿ ಆಸ್ಪತ್ರೆಯ ಆವರಣದಿಂದ ಮಹಿಳೆ ತೆರಳಿದ್ದಳು.
ಕಾರ್ಯಪ್ರವೃತ್ತರಾದ ಪೊಲೀಸರು, ಈ ಇಬ್ಬರು ಶಂಕಿತ ಮಹಿಳೆಯರ ಬಗ್ಗೆ ಆಟೊ ಚಾಲಕರನ್ನು ವಿಚಾರಿಸಿದರು. ಸ್ಥಳೀಯ ಆಟೊಚಾಲಕ ಆಜಾದ್ ಎಂಬಾತ ಈ ಇಬ್ಬರು ಮಹಿಳೆಯರು ಮತ್ತು ಮಗುವಿನ ಜತೆ ತೆರಳಿದ್ದಾಗಿ ಮಾಹಿತಿ ನೀಡಿದರು. ಗಾಜಿಯಾಬಾದ್ನ ಖೋಡಾ ಕಾಲೋನಿಯಲ್ಲಿ ಇಬ್ಬರು ಮಹಿಳೆಯನ್ನು ಬಿಟ್ಟಿದ್ದಾಗಿ ಆಜಾದ್ ಒಪ್ಪಿಕೊಂಡ.
ಅಲ್ಲಿನ ಮನೆಗಳನ್ನು ಶೋಧಿಸಿದಾಗ ಎರಡನೇ ಮಹಡಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಮಗುವನ್ನು ಪತ್ತೆ ಮಾಡಲಾಯಿತು. ಇಬ್ಬರನ್ನೂ ಬಂಧಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಲಾಯಿತು. ಇಬ್ಬರು ಮಹಿಳೆಯರನ್ನು ಉತ್ತರ ಪ್ರದೇಶದ ಎತ್ವಾ ಎಂಬಲ್ಲಿನ ಪೂನಂ ಹಾಗೂ ರುಚಿ ಎಂದು ಗುರುತಿಸಲಾಗಿದೆ. ಮದುವೆಯಾಗಿ ನಾಲ್ಕು ವರ್ಷಗಳಾದರೂ ಪೂನಂಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.(ಎನ್.ಬಿ)