ಮೈಸೂರು

ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಬೇಕು: ಪ್ರೊ. ವೇದಪ್ರಕಾಶ್ ಸಲಹೆ

ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಹಕಾರ ಸಂಘಗಳ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಬೇಕಿದೆ ಎಂದು ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ. ವೇದಪ್ರಕಾಶ್ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಆಚರಣೆಯ ಅಂಗವಾಗಿ ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಮತ್ತು ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ನವೀಕೃತ ಯುಜಿಸಿ-ಹೆಚ್ಆರ್ ಡಿಸಿ ಕಟ್ಟಡವನ್ನು ವೇದ ಪ್ರಕಾಶ್  ಉದ್ಘಾಟಿಸಿದರು. ಇದೇ ಸಂದರ್ಭ “20ನೇ ಶತಮಾನದಲ್ಲಿ ಭಾರತದ ಭಾಷಾ ರಾಜಕೀಯ ಮತ್ತು ನೀತಿ” ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಕೊರತೆಯಿದೆ. ಆರ್ಥಿಕವಾಗಿ ಆಂತರಿಕ ಸಂಪನ್ಮೂಲಗಳ ಹೆಚ್ಚಳಕ್ಕೆ ಪ್ರಾಶಸ್ತ್ಯ ನೀಡಬೇಕಿದೆ ಎಂದರು. ವಿದೇಶಗಳಲ್ಲಾದರೆ ಸಾಲ ಪಡೆದ ವಿದ್ಯಾರ್ಥಿಗಳಿಗೆ ಸಾಲ ಮರುಪಾವತಿ, ಮನ್ನಾ ಸೌಲಭ್ಯವಿದೆ. ಆದರೆ ಭಾರತದಲ್ಲಿ ಆ ವ್ಯವಸ್ಥೆಯಿಲ್ಲ. ಇಲ್ಲಿ ತಲಾ ಆದಾಯಕ್ಕಿಂತ ವೆಚ್ಚವೇ ಜಾಸ್ತಿ. ಅದಕ್ಕಾಗಿ ಆರ್ಥಿಕವಾಗಿ ಸುಧಾರಣೆಯಾಗಲೇಬೇಕಿದೆ ಎಂದರು.

ಆಂತರಿಕವಾಗಿ ಆರ್ಥಿಕ ಸಂಪನ್ಮೂಲ ಹೆಚ್ಚಳಕ್ಕೆ ಆದ್ಯತೆ ನೀಡಬೇಕಿದೆ. ವಿದ್ಯಾರ್ಥಿಗಳಿಂದ ಶುಲ್ಕ ವಸೂಲಾತಿ ಸೇರಿದಂತೆ ಅನೇಕ ಕ್ರಮ ಕೈಗೊಳ್ಳಬೇಕಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಾಲ ಯೋಜನೆಯಲ್ಲಿ ಕೆಲವೊಂದು ಮಾರ್ಪಾಡು ಅಗತ್ಯವಿದೆ ಎಂದರು.

ಭಾರತದಲ್ಲಿ ಸಾಮಾಜಿಕ ವ್ಯವಸ್ಥೆ ಸರಿ ಇದ್ದಿದ್ದರೆ ಎಲ್ಲವೂ ಸುಧಾರಣೆಯಾಗುತ್ತಿತ್ತು. ಸಾಮಾಜಿಕ ವ್ಯವಸ್ಥೆಯೇ ಸರಿ ಇಲ್ಲ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ಕುಲಸಚಿವ ಪ್ರೊ. ಆರ್. ರಾಜಣ್ಣ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ಎಸ್. ಶ್ರೀಕಂಠಸ್ವಾಮಿ, ಯುಜಿಸಿ- ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಪ್ರೊ. ಮಿಡತಲ ರಾಣಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: