
ದೇಶಪ್ರಮುಖ ಸುದ್ದಿ
ಕಪ್ಪು’ಚಿನ್ನ’ದ ಮೇಲೆ ಕೇಂದ್ರ ಸರಕಾರದ ಸವಾರಿ
ಕಪ್ಪುಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರ ಇದೀಗ ಚಿನ್ನದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ನಿಮ್ಮ ಆದಾಯಕ್ಕೂ ಚಿನ್ನ ಗಳಿಕೆಗೂ ತಾಳೆಯಾಗದಿದ್ದಲ್ಲಿ ನೀವು ತೆರಿಗೆ ಕಟ್ಟಬೇಕಾಗಬಹುದು. ಘೋಷಿಸಿದ ಆದಾಯದಲ್ಲಿ ಚಿನ್ನ ಕೊಂಡರೆ ತೆರಿಗೆ ಇಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸಚಿವಾಲಯ ಹೇಳಿದೆ.
ನ.8ರಂದು ಪ್ರಧಾನಿ ನರೇಂದ್ರ ಮೋದಿಯವರು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದರಿಂದ ಕಾಳಧನಿಕರು ಚಿನ್ನದ ಮೇಲೆ ಹೂಡಿಕೆ ಪ್ರಮಾಣ ಹೆಚ್ಚು ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಕಪ್ಪುಹಣವನ್ನು ಬದಲಾಯಿಸಿಕೊಳ್ಳಲು ಚಿನ್ನವನ್ನು ಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕೇಂದ್ರ ಸರಕಾರ ಈ ನಿಯಮವನ್ನು ಜಾರಿಗೆ ತಂದಿರುವ ಸಾಧ್ಯತೆಯಿದೆ.
ಈ ನೂತನ ಕಾಯಿದೆಯಂತೆ ಗೃಹಿಣಿಯರು 500 ಗ್ರಾಂ, ಪುರುಷರು 100 ಗ್ರಾಂ, ಅವಿವಾಹಿತೆಯರು 250 ಗ್ರಾಂ ಚಿನ್ನವನ್ನು ಹೊಂದಬಹುದು. ಇದಕ್ಕಿಂತ ಹೆಚ್ಚು ಚಿನ್ನವನ್ನು ಕೂಡ ಕೊಳ್ಳಬಹುದು. ಆದರೆ, ಅದಕ್ಕೆ ಕೃಷಿ, ಸಣ್ಣ ಉಳಿತಾಯ, ಘೋಷಿಸಿದ ಆದಾಯದಲ್ಲಿ ಚಿನ್ನ ಖರೀದಿಸಿದ್ದರೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಪೂರ್ವಜರಿಂದ ಬಂದಂತಹ ಚಿನ್ನದ ಮೇಲೂ ತೆರಿಗೆ ಇಲ್ಲ. ಚಿನ್ನದ ಮೇಲೆ ಆದಾಯ ತೆರಿಗೆ ತಿದ್ದುಪಡಿ ಕಾಯಿದೆ ಅನ್ವಯಿಸುವುದಿಲ್ಲ. ಐಟಿ ದಾಳಿ ವೇಳೆ ದಾಖಲೆ ಇಲ್ಲದ ಚಿನ್ನಾಭರಣಗಳ ಮೇಲೆ ತೆರಿಗೆ ಕಟ್ಟಬೇಕು ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.