ದೇಶಪ್ರಮುಖ ಸುದ್ದಿ

ಸಂಸದನಾಗಿದ್ದರೆ ಸಿಜೆಐ ಪದಚ್ಯುತಿ ನಿಲುವಳಿಗೆ ಸಹಿ ಹಾಕುತ್ತಿರಲಿಲ್ಲ: ಕಾಂಗ್ರೆಸ್ ಮುಖಂಡ

ನವದೆಹಲಿ (ಏ.21): ನಾನು ಸಂಸತ್ ಸದಸ್ಯನಾಗಿದ್ದರೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧದ ಪದಚ್ಯುತಿ ನಿಲುವಳಿಗೆ ಖಂಡಿತಾ ಸಹಿ ಹಾಕುತ್ತಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಮುಖಂಡ ಅಶ್ವಿನ್ ಕುಮಾರ್ ಅವರು ಹೇಳಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಕಾಂಗ್ರೆಸ್ ಸೇರಿದಂತೆ ಒಟ್ಟು 7 ವಿಪಕ್ಷಗಳು ಮಂಡಿಸಲು ಮುಂದಾಗಿರುವ ಪದಚ್ಯುತಿ ನಿಲುವಳಿ ವಿಚಾರ ಇದೀಗ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪದಚ್ಯುತಿ ನಿಲುವಳಿ ವಿಚಾರ ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವುದು ದುಃಖಕರ ಸಂಗತಿ ಎಂದು ಸ್ವತಃ ಸುಪ್ರೀಂ ಕೋರ್ಟ್ ವಿಷಾಧ ವ್ಯಕ್ತಪಡಿಸಿದೆ. ಇದರ ನಡುವೆಯೇ ಕಾಂಗ್ರೆಸ್ ಪಕ್ಷ ಮಾಜಿ ರಾಜ್ಯಸಭಾ ಸದಸ್ಯ ಅಶ್ವಿನ್ ಕುಮಾರ್ ಅವರು ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ನಾನು ಸಂಸತ್ ಸದಸ್ಯನಾಗಿದಿದ್ದರೆ, ಸಿಜೆಐ ಪದಚ್ಯುತಿಗೊಳಿಸುವ ನಿಲುವಳಿಗೆ ಸಹಿ ಹಾಕುವಂತೆ ಯಾರಾದರೂ ತಂದು ನನ್ನ ಮುಂದಿಟ್ಟರೆ ಖಂಡಿತಾ ನಾನು ಈ ನಿಲುವಳಿಗೆ ಸಹಿ ಹಾಕುತ್ತಿರಲಿಲ್ಲ. ಅನಗತ್ಯ ವಿವಾದದಲ್ಲಿ ಸಿಲುಕುವುದು ನನಗೆ ಇಷ್ಟವಿಲ್ಲ. ಕೆಲ ತತ್ವಾದರ್ಶಗಳನ್ನು ನಾನು ಪಾಲಿಸಿಕೊಂಡು ಬರುತ್ತಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಅಭಿಪ್ರಾಯದಂತೆ ಸಿಜೆಐ ವಿರುದ್ಧ ಪದಚ್ಯುತಿ ನಿಲುವಳಿ ನಿರ್ಣಯ ನಿಜಕ್ಕೂ ತೀವ್ರ ಪ್ರಮಾಣದ ನಡೆಯಾಗಿದ್ದು, ಇಂತಹ ಕಠಿಣ ಕ್ರಮವನ್ನು ತಡೆಯಬೇಕಿತ್ತು ಎಂದು ಅಶ್ವಿನ್ ಕುಮಾರ್ ಹೇಳಿದ್ದಾರೆ.

ಅಶ್ವಿನ್ ಕುಮಾರ್ ಅವರು ಕಾಂಗ್ರೆಸ್ ಪಕ್ಷ ಮಾಜಿ ರಾಜ್ಯಸಭಾ ಸದಸ್ಯರಾಗಿದ್ದು, 2002ರಲ್ಲಿ ಕಾಂಗ್ರೆಸ್ ಪಕ್ಷದಿಂದ ಪಂಜಾಬ್ ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಂತೆಯೇ ಕಾಂಗ್ರೆಸ್ ಪಕ್ಷದ ವಕ್ತಾರರಾಗಿಯೂ ಕೆಲಸ ಮಾಡಿದ್ದ ಅಶ್ವಿನ್ ಕುಮಾರ್ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ಅಟಾರ್ನಿ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು. (ಎನ್.ಬಿ)

Leave a Reply

comments

Related Articles

error: