ಮೈಸೂರು

‘ವ್ಯಾಪಾರ್’ ಆನ್‍ಲೈನ್ ವೆಬ್‍ಸೈಟ್ ಉದ್ಘಾಟನೆ

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವ್ಯಾಪಾರಸ್ಥರು ಹಾಗೂ ವಾಣಿಜ್ಯೋದ್ಯಮಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಗ್ರಾಹಕರು ವೃತ್ತಿ ರಹದಾರಿ ಪ್ರಮಾಣಪತ್ರವನ್ನು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ ಎಂದು ಮೇಯರ್ ಬಿ.ಎಲ್. ಭೈರಪ್ಪ ಹೇಳಿದರು.

ಹಳೇ ಕೌನ್ಸಿಲ್ ಸಭಾಂಗಣದಲ್ಲಿ ‘ವ್ಯಾಪಾರ್’ ಶೀರ್ಷಿಕೆಯ ಆನ್‍ಲೈನ್ ವೆಬ್‍ಸೈಟ್ ಉದ್ಘಾಟಿಸಿ ಮಾತನಾಡಿ, ವ್ಯಾಪಾರಿಗಳು, ಉದ್ಯಮಿಗಳ ಒತ್ತಾಯದ ಮೇರೆಗೆ ‘ವೃತ್ತಿ ರಹದಾರಿ ಪ್ರಮಾಣ ಪತ್ರ’ ಪಡೆಯಲು ಇನ್ನು ಮುಂದೆ ಪಾಲಿಕೆ ಅಧಿಕಾರಿಗಳ ಮುಂದೆ ಗಂಟೆಗಟ್ಟಲೆ ನಿಂತು ಗೋಗರೆಯುವ ಅವಶ್ಯಕತೆಯಿಲ್ಲ. ಅವಶ್ಯಕತೆ ಇರುವವರು ನಗರ ಪಾಲಿಕೆ ವೆಬ್‍ಸೈಟ್‍ಗೆ ಲಾಗಿನ್ ಆಗಿ ಅಗತ್ಯ ದಾಖಲೆ ಸಲ್ಲಿಸಿ, ಪ್ರಮಾಣ ಪತ್ರ ಪಡೆಯಬಹುದಾಗಿದೆ ಎಂದರು.

ಪಾಲಿಕೆ ವೆಬ್‍ಸೈಟ್‍ನಲ್ಲಿ ‘ಸಿಟಿಜನ್ ಆನ್‍ಲೈನ್ ಸರ್ವಿಸ್’ ಟ್ಯಾಬ್‍ ಅನ್ನು ಕ್ಲಿಕ್ ಮಾಡಿ, ವ್ಯಾಪಾರ್ ಅಪ್ಲಿಕೇಷನ್‍ನಲ್ಲಿ ವೃತ್ತಿ ಪರವಾನಗಿ ಅರ್ಜಿಯ ನಮೂನೆ ಆಯ್ಕೆ ಮಾಡಿಕೊಂಡು ಅರ್ಜಿದಾರರ ಹೆಸರು, ವಿಳಾಸ, ಫೋಟೋ, ಮೊಬೈಲ್ ಸಂಖ್ಯೆ ‘ವ್ಯಾಪಾರ’ ಮಾಡುವ ಸ್ಥಳದ ದಾಖಲೆಗಳನ್ನು ಟೈಪ್ ಮಾಡಬೇಕು ಎಂದರು.

ಆಸ್ತಿ ತೆರಿಗೆ ರಸೀದಿ, ಮಾಲೀಕತ್ವ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದರೆ, ಎಲ್ಲ ದಾಖಲಾತಿಗಳು ದೃಢೀಕೃತವಾದ ನಂತರ ಅರ್ಜಿಯ ಪ್ರಗತಿ ಬಗ್ಗೆ ಎಸ್‍ಎಂಎಸ್ ಮೂಲಕ ಅರ್ಜಿದಾರರಿಗೆ ಪ್ರತಿ ಹಂತದ ಮಾಹಿತಿಯ ರವಾನೆಯಾಗುತ್ತದೆ ಎಂದು ತಿಳಿಸಿದರು.

‘ಸಿಟಿಜನ್ ಆನ್‍ಲೈನ್ ಸರ್ವೀಸ್ ಕ್ಲಿಕ್’ ಮಾಡಿ ದೂರುಗಳನ್ನು ದಾಖಲಿಸಬಹುದು. 080-23108108 ದೂ. ಸಂಖ್ಯೆಗೆ ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೆ ದೂರುಗಳನ್ನು ದಾಖಲಿಸಬಹುದು ಅಥವಾ ವಾಟ್ಸಾಪ್ ಸಂಖ್ಯೆ 82777-77728 ರಲ್ಲಿ ದೂರುಗಳನ್ನು ಸಲ್ಲಿಸಬಹುದು. ಇದಕ್ಕೆ ತಗುಲುವ ಶುಲ್ಕವನ್ನು ಆಯಾ ವಲಯ ಕಚೇರಿಗಳಲ್ಲಿ ಕಟ್ಟಬೇಕು. ಅರ್ಜಿದಾರರಿಗೆ ರಹದಾರಿ ಪ್ರಮಾಣ ಪತ್ರ ಇ-ಮೇಲ್‍ನಲ್ಲಿ ಕಳುಹಿಸಲಾಗುವುದು.

ಉಪ ಮೇಯರ್ ವನಿತಾ ಪ್ರಸನ್ನ, ಪಾಳಿಕೆ ಆಯುಕ್ತ ಜಿ.ಜಗದೀಶ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ, ಆರೋಗ್ಯಾಧಿಕಾರಿ ಡಾ.ರಮಚಂದ್ರ, ಡಾ. ನಾಗರಾಜು ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: