
ಮೈಸೂರು
ದಲಿತರ ಹಿತಕ್ಕಾಗಿ ಚಾಮುಂಡೇಶ್ವರಿಯಿಂದ ಸ್ಪರ್ಧೆ : ಶಾಂತರಾಜ್
ಮೈಸೂರು, ಏ.23 : ಶೋಷಿತ ದಲಿತ ವರ್ಗದ ಹಿತರಕ್ಷಣೆಗಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ದಲಿತ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜ್ ತಿಳಿಸಿದರು.
ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಏ.24ರಂದು ನಾಮಪತ್ರ ಸಲ್ಲಿಸುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಾವುದೇ ಪಕ್ಷಗಳು ದಲಿತರನ್ನು ರಕ್ಷಣೆ ಮಾಡಲು ಪ್ರಯತ್ನ ಮಾಡುತ್ತಿಲ್ಲ, ಕೇವಲ ಪ್ರಚಾರಕ್ಕಾಗಿ ದಲಿತರ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿದ್ದು ಪ್ರತಿ ಚುನಾವಣೆಯಲ್ಲಿಯೂ ಮೋಸ ಮಾಡುತ್ತಿವೆ, ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ದಲಿತರನ್ನು ಜಾಗೃತಿಗೊಳಿಸುವ ಉದ್ದೇಶದಿಂದ ದಲಿತ ವೆಲ್ ಫೇರ್ ಟ್ರಸ್ಟ್ ನಿಂದ ಮೈಸೂರಿನ ಟಿ.ನರಸೀಪುರ, ನಂಜನಗೂಡು, ವರುಣಾ, ಕೆ.ಆರ್. ಕ್ಷೇತ್ರಗಳಲ್ಲಿ ಸ್ಪರ್ಧಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತರಿಗಾಗಿ ಹಲವು ಕಾರ್ಯಕ್ರಮಗಳನ್ನು ನೀಡಿರುವುದಾಗಿ ಹೇಳುತ್ತಿದ್ದರು, ಸಂಪೂರ್ಣವಾಗಿ ದಲಿತರ ಮೇಲಿನ ಶೋಷಣೆ ತಪ್ಪಿಸಲು ಸಾಧ್ಯವಾಗಿಲ್ಲ ಎಂದರು.
ಗೋಷ್ಠಿಯಲ್ಲಿ ಟ್ರಸ್ಟ್ ನ ಮುಖಂಡರಾದ ಪ್ರೊ.ಟಿ.ಎಂ.ಮಹೇಶ್, ಮಹದೇವ ಮೂರ್ತಿ, ಗಂಗಾಧರ, ಬಿ.ಎಸ್.ನಾಗರಾಜ್, ರಾಜರತ್ನಂ ಹಾಜರಿದ್ದರು. (ವರದಿ : ಕೆ.ಎಂ.ಆರ್)