ಪ್ರಮುಖ ಸುದ್ದಿಮೈಸೂರು

ಸಚಿವ ಡಾ.ಎಚ್.ಸಿ. ಮಹದೇವಪ್ಪ ರಾಜೀನಾಮೆಗೆ ಆಗ್ರಹ: ಪ್ರತಿಭಟನೆ

ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಎಚ್.ಸಿ.ಮಹದೇವಪ್ಪ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎನ್‍.ಆರ್. ವಿಧಾನಸಭೆ ಕ್ಷೇತ್ರದ ಬಿಜೆಪಿ ವತಿಯಿಂದ ಶುಕ್ರವಾರ ಎಫ್‍ಟಿಎಸ್‍ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಸಚಿವ ಮಹದೇವಪ್ಪ ಅವರ ಆಪ್ತರಾಗಿರುವ ಜಯಚಂದ್ರ ಅವರ ನಿವಾಸದ ಮೇಲೆ ಗುರುವಾರದಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 2000 ರೂ. ಮುಖಬೆಲೆಯ ಸುಮಾರು 4 ಕೋಟಿ ರು. ಪತ್ತೆಯಾಗಿತ್ತು. ನೋಟು ರದ್ದಾಗಿನಿಂದ ಕಾಂಗ್ರೆಸ್‍ ಬಿಜೆಪಿಯ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿತ್ತು. ಬಿಜೆಪಿಯವರಿಗೆ ಎಲ್ಲ ಮೊದಲೇ ತಿಳಿದಿತ್ತು. ಹಾಗಾಗಿ ಅವರು ಕಪ್ಪುಹಣವನ್ನು ಮೊದಲೇ ವಿನಿಮಯ ಮಾಡಿಕೊಂಡಿದ್ದರು ಎಂದೆಲ್ಲ ಹೇಳಿಕೆಗಳನ್ನು ನೀಡಿದ್ದರು. ಈಗ ನೋಡಿದರೆ ಸಚಿವರ ಆಪ್ತರ ಮನೆಯಲ್ಲೇ ಕೋಟಿಗಟ್ಟಲೆ ಹಣ ಪತ್ತೆಯಾಗಿದೆ. ಇದರಿಂದ ಯಾರು ತಪ್ಪಿತಸ್ಥರು ಎಂಬುದು ಗೊತ್ತಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.

ನೋಟು ನಿಷೇಧದಿಂದ ಸಾಮಾನ್ಯ ಜನರು ಬ್ಯಾಂಕ್‍ ಮುಂದೆ ಕ್ಯೂ ನಿಂತು ಒಂದೆರಡು ಸಾವಿರ ರು. ಪಡೆಯಲೇ ಒದ್ದಾಡುತ್ತಿದ್ದಾರೆ. ಅಂತಹದ್ದರಲ್ಲಿ ಸಚಿವರ ಆಪ್ತರಿಗೆ 2 ಸಾವಿರ ರು. ಮುಖಬೆಲೆಯ ಅಷ್ಟೊಂದು ನೋಟುಗಳು ಹೇಗೆ ಸಿಕ್ಕಿತು. ಬಿಜೆಪಿಯವರ ಬಳಿಯಲ್ಲಿ ಕಪ್ಪುಹಣವಿಲ್ಲ. ಕಪ್ಪುಹಣವಿರುವುದು ಕಾಂಗ್ರೆಸ್‍ ಮುಖಂಡರ ಬಳಿ. ಸಚಿವ ಮಹದೇವಪ್ಪ ಅವರ ಆಪ್ತರ ಮನೆಯಲ್ಲಿ ಈ ಘಟನೆ ನಡೆದಿರುವುದರಿಂದ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ನೈತಿಕತೆಯಿಲ್ಲ. ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಅವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಎನ್‍.ಆರ್‍. ಕ್ಷೇತ್ರದ ಬಿಜೆಪಿ ಮುಖಂಡ ಮುರಳಿ, ಪ್ರಧಾನ ಕಾರ್ಯದರ್ಶಿ ನರಸಿಂಹ, ಅನಿಲ್ ಥಾಮಸ್, ಬಿಜೆಪಿ ಮುಖಂಡ ಪ್ರಬಾಕರ ಶಿಂಧೆ, ಬಿಜೆಪಿ ನಗರ ಪಾಲಿಕೆ ಸದಸ್ಯೆ(ವಾರ್ಡ್ ನಂ.48) ರತ್ನಾ ಲಕ್ಷ್ಮಣ್ ಮೊದಲಾದವರು ಭಾಗವಹಿಸಿದ್ದರು.

Leave a Reply

comments

Related Articles

error: