ಮೈಸೂರು

ಟಿಕೆಟ್ ಕೈ ತಪ್ಪಿದ್ದು ಹೈಕಮಾಂಡ್ ನಿರ್ಧಾರ; ಬಿಜೆಪಿ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ ಬಿ.ವೈ.ವಿಜಯೇಂದ್ರ

ಮೈಸೂರು,ಏ.25-ವರುಣಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ್ದು ಹೈಕಮಾಂಡ್ ನಿರ್ಧಾರ. ಟಿಕೆಟ್ ಕೈ ತಪ್ಪಿದ್ದರಿಂದ ನನ್ನ ಮನಸ್ಸಿಗೆ ನೋವಾಗಿಲ್ಲ. ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ವರುಣಾ ಕ್ಷೇತ್ರದ ಮತದಾರರ ಸಮಸ್ಯೆ ಅರಿತುಕೊಳ್ಳುವ ಪ್ರಯತ್ನ ಮಾಡಿದ್ದೆ. ವರುಣಾ ಕ್ಷೇತ್ರದ ಜನ ನನಗೆ ಅಭೂತಪೂರ್ವ ಬೆಂಬಲ ನೀಡಿದರು. ನಾನು ಪ್ರಚಾರಕ್ಕೆ ಹೋದಾಗ ಮತದಾರರಲ್ಲಿ ಭಾರತೀಯ ಜನತಾಪಾರ್ಟಿ ಪರವಾಗಿ ಕೆಲಸ ಮಾಡಿದ್ದೆ. ನಾನು ಎಲ್ಲಿಯೂ ಅಭ್ಯರ್ಥಿ ಅಂತಾ ಹೇಳಿಕೊಂಡಿರಲಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ ಅವರದೇ ಆದ ಕಾರಣ ನೀಡಿ ಅಭ್ಯರ್ಥಿ ಬದಲಾವಣೆ ಮಾಡಿದ್ದಾರೆ. ನಾನು ವರುಣಾ ಕ್ಷೇತ್ರದ ಅಭ್ಯರ್ಥಿ ಅಲ್ಲದಿದ್ದರೂ ನಾನು ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷದ ಪರ ಕೆಲಸ ಮಾಡುವೆ ಎಂದರು.

ನಾನು ವರುಣಾ ಕ್ಷೇತ್ರದ ಆಕಾಂಕ್ಷಿಯಾಗಿದ್ದು ನಿಜ. ಮುಂದೆ ನಾನು ಮುಂದೆ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ನಾನೇನು ಇಲ್ಲಿ ವರ್ಷಗಟ್ಟಲೆ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಿಲ್ಲ. ನನಗೆ ರಾಜಕೀಯ ಅನಿವಾರ್ಯ ಅಲ್ಲ. ಜನ ಸೇವೆಗೆ ಸಾಕಷ್ಟು ದಾರಿ ಇವೆ. ನಮ್ಮ ಪಕ್ಷದ ಎಲ್ಲಾ ಮುಖಂಡರು ವಿಜೇಂದ್ರ ಅಭ್ಯರ್ಥಿಯಾಗಬೇಕು ಎಂದು ಅಪೇಕ್ಷೆ ಪಟ್ಟಿದ್ದರು. ಕಾರ್ಯಕರ್ತರ ಒತ್ತಾಯದ ಮೆರೆಗೆ ನಾನು ಅಭ್ಯರ್ಥಿಯಾಗಲು ಮುಂದಾಗಿದ್ದೆ. ನಾನು ಕೇವಲ ಸಾಮಾನ್ಯ ಕಾರ್ಯಕರ್ತ ಅಷ್ಟೇ ಎಂದು ಹೇಳಿದರು.

ನಾನು ಮನೆ ಖಾಲಿ ಮಾಡುವ ಪ್ರಶ್ನೆಯೇ ಇಲ್ಲ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡುತ್ತೇನೆ. ನನ್ನ ಕಡೆಯಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ ಎಂದು ವರುಣಾ ಕ್ಷೇತ್ರದ ಜನರ ಕ್ಷಮೆಯಾಚಿಸಿದರಲ್ಲದೆ, ನನಗೆ ಟಿಕೆಟ್ ಸಿಗದ ಸಂದರ್ಭದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ನಡೆದ ಲಾಠಿ ಚಾರ್ಜ್ ಗೂ ಕ್ಷಮೆ ಕೇಳಿದರು. (ಕೆ.ಎಸ್, ಎಂ.ಎನ್)

 

Leave a Reply

comments

Related Articles

error: