ಸುದ್ದಿ ಸಂಕ್ಷಿಪ್ತ

ಚುನಾವಣೆ: ಭ್ರಷ್ಟಚಾರ ಕಂಡು ಬಂದಲ್ಲಿ ದೂರು ಸಲ್ಲಿಸಿ

ಮೈಸೂರು(ಏ.25): 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಮತದಾರ ತನ್ನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕಾಲ ಸನ್ನಿಹಿತವಾಗಿದೆ. ಯಾವದೇ ವ್ಯಕ್ತಿ, ಮತ್ತೊಬ್ಬ ವ್ಯಕ್ತಿಯನ್ನು ಯಾವುದೇ ವ್ಯಕ್ತಿಯ/ಪಕ್ಷದ ಪರವಾಗಿ ತನ್ನ ಮತವನ್ನು ಚಲಾಯಿಸಲು ಪ್ರೇರೇಪಿಸುವ ದೃಷ್ಟಿಯಿಂದ ನಗದು ಅಥವಾ ಸಾಮಾಗ್ರಿ ಅಥವಾ ಬೇರಾವುದೇ ರೂಪದಲ್ಲಿ ಪ್ರತಿಫಲವನ್ನು ನೀಡದರೆ ಭಾರತೀಯ ದಂಡಸಂಹಿತೆ 171(ಬಿ) ಪ್ರಕಾರ ಹಾಗೆ ಹಣ ಅಥವಾ ಸಾಮಾಗ್ರಿಯನ್ನು ನೀಡುವ ಮತ್ತು ತೆಗೆದುಕೊಳ್ಳುವ ಇಬ್ಬರು ವ್ಯಕ್ತಿಗಳಿಗೂ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ ಅಥವಾ ದಂಡ ಅಥವಾ ಇವೆರಡೂ ಶಿಕ್ಷೆಗಳನ್ನು ವಿಧಿಸಲು ಅವಕಾಶವಿದೆ ಎಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ಯಾವುದೇ ಪ್ರೇರೇಣೆಗೆ ಒಳಗಾಗದೆ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ತಮಗೆ ಇಷ್ಟಬಂದ ವ್ಯಕ್ತಿಗೆ ಮತ ಚಲಾಯಿಸಲು ಕೋರಿದೆ. ಮಹಿಳಾ ಸಂಘಗಳು ಸಹ ಎಲ್ಲ ಬಗೆಯ ಆಮಿಷಗಳಿಂದಲೂ ದೂರ ಉಳಿಯುವುದು. ಯಾವುದೇ ವರ್ತಕರು ನೈಜ ಬಿಲ್ಲುಗಳಿಲ್ಲದೆ ಮತ್ತು ಬಿಲ್ಲುಗಳಲ್ಲಿ ಜಿಎಸ್‍ಟಿ ಮೊತ್ತವನ್ನು ನಮೂದಿಸದೇ ಸಾಮಾಗ್ರಿಗಳನ್ನು ಮಾರಾಟ ಮಾಡಿದಲ್ಲಿ ನಿಯಮಬಾಹಿರವಾಗುವುದರಿಂದ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.

ಇಂತಹ ಭ್ರಷ್ಟಾಚಾರ ನಡೆದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಉಚಿತ ದೂರವಾಣಿ ಸಂಖ್ಯೆ (ಟೋಲ್‍ಫ್ರೀ) 1077 ಅಥವಾ ನಂಜನಗೂಡು ಚುನಾವಣಾಧಿಕಾರಿಗಳ ದೂರವಾಣಿಸಂಖ್ಯೆ 9480873002 ಅಥವಾ ನಂಜನಗೂಡು ತಾಲ್ಲೂಕು ಕಚೇರಿ ಕಂಟ್ರೋಲ್ ರೂಂನ ಉಚಿತ ದೂರವಾಣಿ(ಟೋಲ್‍ಫ್ರೀ) 08221-226814ಗೆ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ.

ಚುನಾವಣಾ ಆಯೋಗವು ಮಾದರಿ ನೀತಿಸಂಹಿತೆಯನ್ನು ಅನುಸರಿಸುವಂತೆ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ, ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಚುನಾವಣೆಯ ವೇಳೆಯಲ್ಲಿ ಮತದಾರರನು ತಮ್ಮ ಪರವಾಗಿ ಮತ ಚಲಾವಣೆ ಮಾಡಲು ಯಾವುದೇ ಆಮಿಷಗಳನ್ನು ಒಡ್ಡದಂತೆ ತಡೆಹಿಡಿದು ನ್ಯಾಯಸಮ್ಮತ ಚುನಾವಣೆ ನಡೆಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 4 ರಿಂದ 5 ವಿಚಕ್ಷಣಾ ದಳ ಮತ್ತು 12ಕ್ಕಿಂತ ಹೆಚ್ಚು ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಯಾವುದೇ ಪಕ್ಷದ ಅಭ್ಯರ್ಥಿಗಳು ರಾಜಕೀಯ ಸಭೆ-ಸಮಾರಂಭಗಳನ್ನು ನಡೆಸಬೇಕಾದಲ್ಲಿ ಚುನಾವಣಾ ಆಯೋಗದಿಂದ ಪ್ರತಿ ಕ್ಷೇತ್ರಕ್ಕೆ ನೇಮಕವಾಗಿರುವ ಚುನಾವಣಾಧಿಕಾರಿಗಳ ಅನುಮತಿಯನ್ನು ಪಡೆಯುವುದು ಕಡ್ಡಾಯಗೊಳಿಸಿದೆ. ಪ್ರತಿ ಅಭ್ಯರ್ಥಿಯ ಖರ್ಚು-ವೆಚ್ಚದ ಮೇಲೆ ಚುನಾವಣಾ ಆಯೋಗದಿಂದ ಪ್ರತಿ ತಾಲ್ಲೂಕಿಗೆ ನೇಮಕವಾಗಿರುವ ಅಧಿಕಾರಿಗಳು ಗಮನ ಹರಿಸುತ್ತಿದ್ದಾರೆ. ಯಾವುದೇ ಅಭ್ಯರ್ಥಿ 28 ಲಕ್ಷ ರೂ. ಗಳಿಗಿಂತ ಹೆಚ್ಚು ಹಣವನ್ನು ಚುನಾವಣೆಗೆ ಖರ್ಚು ಮಾಡುವಂತಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: