ಮೈಸೂರು

ಅಂಚೆ ಮತ ಪತ್ರ ಯಶಸ್ವಿ ಅನುಷ್ಠಾನಕ್ಕೆ ಕ್ರಮ

ಮೈಸೂರು,ಏ.25: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018 ಸಂಬಂಧ ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನದ ದಿನದಂದು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೂ ಮತದಾನದ ಹಕ್ಕನ್ನು ಚಲಾಯಿಸುವ ದೃಷ್ಠಿಯಿಂದ ಅಂಚೆ ಮತಪತ್ರಗಳ ನಿರ್ವಹಣೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಾಗಿರುತ್ತದೆ.

ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಚುನಾವಣಾಧಿಕಾರಿಗಳು ಹಾಗೂ ಅವರ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು,ಕೆ.ಎಸ್.ಆರ್.ಟಿ.ಸಿ ವಾಹನ ಚಾಲಕರು, ನಿರ್ವಾಹಕರು, ಕ್ಲೀನರ್ ಹಾಗೂ ಇತರೆ ಸಿಬ್ಬಂದಿಗಳಿಗೆ ಮತ್ತು ಸೇವಾ ಮತದಾರರುಗಳಿಗೆ ಅಂಚೆಮತ ಪತ್ರಗಳ ಮುಖಾಂತರ ಮತದಾನದ ವ್ಯವಸ್ಥೆಯನ್ನು ನೋಡಿಕೊಳ್ಳಲು ಆಯಾ ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಅವರ ವ್ಯಾಪ್ತಿಯಲ್ಲಿ ಒಬ್ಬ ಪತ್ರಾಂಕಿತ ಅಧಿಕಾರಿಯನ್ನು ಅಂಚೆ ಮತ ಪತ್ರದ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಪೊಲೀಸ್ ಆಯುಕ್ತರು ಮೈಸೂರು, ಪೊಲೀಸ್ ಅಧೀಕ್ಷಕರು ಮೈಸೂರು, ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ ಮೈಸೂರು ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿ,ನಗರ / ಗ್ರಾಮಾಂತರ ಕೆ.ಎಸ್.ಆರ್.ಟಿ.ಸಿ ಮೈಸೂರು ರವರ ವ್ಯಾಪ್ತಿಯಲ್ಲಿಯೂ ಸಹ ಪ್ರತ್ಯೇಕ ಪತ್ರಾಂಕಿತ ಅಂಚೆ ಮತ ಪತ್ರದ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ಜಿಲ್ಲೆಯ ಎಲ್ಲಾ 11 ವಿಧಾನ ಸಭಾ ಕ್ಷೇತ್ರದ ರಿಟರ್ನಿಂಗ್ ಆಫೀಸರ್ ರವರ ಕಚೇರಿಯಲ್ಲಿ ಅಂಚೆ ಮತಪತ್ರದ ಸಹಾಯವಾಣಿಯನ್ನು ತೆರೆದಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಎಲ್ಲಾ ಇಲಾಖಾಧಿಕಾರಿಗಳು ಸಿಬ್ಬಂದಿ ವರ್ಗದವರು, ಮತಗಟ್ಟೆ ಅಧಿಕಾರಿಗಳು ಹಾಗೂ ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಗ್ರಹಿಸಿದ ಖಾಸಗಿ ವಾಹನಗಳ ಚಾಲಕರು /ನಿರ್ವಾಹಕರು ಮತ್ತು ಪೋಟೋಗ್ರಾಫರ್, ವಿಡಿಯೋ ಗ್ರಾಫರ್ಗಳು ತಮ್ಮ ವಿಧಾನ ಸಭಾ ಕ್ಷೇತ್ರದ ಸಂಖ್ಯೆ, ಮತದಾರರ ಪಟ್ಟಿಯ ಭಾಗದ ಸಂಖ್ಯೆ, ಕ್ರಮ ಸಂಖ್ಯೆ, ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಒಳಗೊಂಡಂತೆ ಅಂಚೆ ಮತ ಪತ್ರದ ಕೋರಿಕೆ ಅರ್ಜಿ ನಮೂನೆ 12 ರಲ್ಲಿ ಆಯಾ ಅಂಚೆ ಮತ ಪತ್ರದ ನೋಡಲ್ /ರಿಟರ್ನಿಂಗ್ ಅಧಿಕಾರಿಗಳಿಗೆ ಏ.30 ರೊಳಗಾಗಿ ಸಲ್ಲಿಸಲು ಈ ಮೂಲಕ ತಿಳಿಸಿದೆ. ಸುಭದ್ರ ಪ್ರಜಾ ಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆಯನ್ನು ಪೂರಕವಾಗಿಸುವಲ್ಲಿ ತಮ್ಮೆಲ್ಲರ ಸಹಕಾರವನ್ನು ಕೋರಿದೆ. (ಎಂ.ಎನ್)

Leave a Reply

comments

Related Articles

error: