
ದೇಶ
ಪ.ಬಂಗಾಳದ ಟೋಲ್ಗೇಟ್ನಲ್ಲಿ ಸೇನೆ ನಿಯೋಜನೆಗೆ ದೀದಿ ಕಿಡಿ
ನೋಟು ಅಮಾನ್ಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಟೋಲ್ಗೇಟ್ಗಳಲ್ಲಿ ಕೇಂದ್ರ ಸರ್ಕಾರವೂ ಸೇನಾಪಡೆಯನ್ನು ನಿಯೋಜಿಸಿರುವುದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸೈನಿಕರು ಟೋಲ್ಗೇಟ್ನಿಂದ ನಿರ್ಗಮಿಸಿದ ಬಳಿಕವಷ್ಟೇ ಕಚೇರಿಯಿಂದ ಹೊರತೆರಳುವುದು ಎಂದು ಟ್ವಿಟ್ ಮಾಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೆ ರಾಜ್ಯಾದ್ಯಂತ ಟೋಲ್ಗೇಟ್ಗಳಲ್ಲಿ ಸೇನೆಯನ್ನು ನಿಯೋಜಿಸಿದ್ದು ಇದಕ್ಕೆ ಟ್ವಿಟರ್ನಲ್ಲಿ ಕಿಡಿ ಕಾರಿದ್ದಾರೆ. ಸೇನಾಪಡೆಯನ್ನು ಟೋಲ್ಗೇಟ್ನಲ್ಲಿ ನಿಯೋಜಿಸುವ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಾರದೇ ನಿಯೋಜಿಸಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ತುರ್ತು ಪರಿಸ್ಥಿತಿ ಘೋಷಣೆಯಾಗಿದೆಯೇ?. ರಾಜ್ಯ ಸರ್ಕಾರದ ಗಮನಕ್ಕೆ ತರದೆ ಸೇನಾ ಕಾರ್ಯಾಚರಣೆ ನಡೆಸುತ್ತಿದ್ದು, ಕೇಂದ್ರ ಸರ್ಕಾರವು ರಾಜಕೀಯ ದ್ವೇಷದಿಂದ ಮಾಹಿತಿ ನೀಡಿಲ್ಲ. ಕಾರ್ಯಾಚರಣೆ ಬಗ್ಗೆ ಸಂಪೂರ್ಣ ವಿವರ ಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಕ್ಷಣಾ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಿ, ಆತಂಕಪಡುವ ಅಗತ್ಯವೇನಿಲ್ಲ. ಸರಕು ಸಾಗಣೆ ವಾಹನಗಳ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸಲು ತಾಲೀಮು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.