ಕರ್ನಾಟಕಪ್ರಮುಖ ಸುದ್ದಿ

ಯಾರ ಬಾಯಿಗೆ ಬಾದಾಮಿ? ಲೆಕ್ಕಾಚಾರದಲ್ಲಿ ಮುಳುಗಿದ ರಾಜಕೀಯ ಚಿಂತಕರು

ಮೈಸೂರು (ಏ.26): ಸಿ.ಎಂ.ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಜೊತೆಗೆ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದ ನಂತರ ರಾಜಕೀಯ ಚಿಂತಕರೂ ತಮ್ಮದೇ ಆದ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ಸಿದ್ದರಾಮಯ್ಯ ಅವರು ಇದು ನನ್ನ ಕೊನೆಯ ಚುನಾವಣೆ ಎಂದಿದ್ದಾರೆ. ಸೋಲಿನ ಮೂಲಕ ಸಿದ್ದರಾಮಯ್ಯ ರಾಜಕಾರಣ ಮುಕ್ತಾಯ ಮಾಡಲು ಪ್ಲಾನ್ ಮಾಡಿರುವ ಜೆಡಿಎಸ್, ಹಾಲಿ ಶಾಸಕ ಜಿ.ಟಿ ದೇವೇಗೌಡ ಅವರನ್ನು ಅಖಾಡಕ್ಕೆ ಇಳಿಸಿ ಪ್ರಬಲ ಪೈಪೋಟಿ ನೀಡುತ್ತಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಸಿ.ಎಂ ಸಿದ್ದರಾಮಯ್ಯ ಮಾಡಿಸಿರುವ ಸರ್ವೇಗಳಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿರುವುದನ್ನು ಮನಗಂಡು ಬೇರೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸೂಕ್ತ ಎಂದು ಸಿ.ಎಂ ಯೋಜಿಸಿದರು. ಅದರಂತೆ ಕುರುಬ ಸಮುದಾಯದ ಜನರು ಹೆಚ್ಚಿನ ಪ್ರಮಾಣದಲ್ಲಿರುವ ಬಾಗಲಕೋಟೆಯ ಬಾದಾಮಿಯಲ್ಲಿ ಸ್ಪರ್ಧಿಸಲು ಅವಕಾಶ ಗಿಟ್ಟಿಸಿದರು.

ಸಿಎಂ ವಿರುದ್ಧ ಬಿಜೆಪಿಯು ಸಂಸದ ಶ್ರೀರಾಮುಲು ಅವರನ್ನೇ ಕಣಕ್ಕಿಳಿಸಿದೆ. ಬಿಜೆಪಿಗೆ ಬಾದಾಮಿಯಲ್ಲಿ ಹೇಳಿಕೊಳ್ಳುವಂತಹ ಕಾರ್ಯಪಡೆ ಇಲ್ಲದಿದ್ದರೂ ರಾಮುಲು ಕಂಪನಿ ಪ್ರವೇಶ ಪಡೆದ ಕಾರಣ ಬಾದಾಮಿ ಹೋರಾಟ ರಂಗೇರಿದೆ. ಇದರ ಜೊತೆಗೆ ಬಿಜೆಪಿಯು ಜಾತಿ ಲೆಕ್ಕಾಚಾರದ ಮೇಲೆ ಗೆಲುವು ಸಾಧಿಸುವ ಯೋಜನೆ ಹಾಕಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ನಾನು ಪ್ರಚಾರ ಮಾಡದೇ ಇದ್ರೂ ಗೆಲ್ತೇನೆ ಎನ್ನುವಷ್ಟರ ಮಟ್ಟಿಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾದಾಮಿಯಲ್ಲಿರುವ ಮತದಾರರ ಜಾತಿ ಬಲಾಬಲಾ ನೋಡುವುದಾದರೆ,  ಒಟ್ಟು ಮತದಾರರು – 2,12,184, ಪುರುಷರು – 1,17,074, ಮಹಿಳೆಯರು – 1,05,110. ಇದರಲ್ಲಿ ಕುರುಬ – 46,000, ಲಿಂಗಾಯತ – 32,000, ಗಾಣಿಗ – 26,000, ಪರಿಶಿಷ್ಟ ಪಂಗಡ – 25,000, ವಾಲ್ಮೀಕಿ – 13,000, ಅಲ್ಪಸಂಖ್ಯಾತರು – 12,000, ಮರಾಠಾ ಕ್ಷತ್ರೀಯ – 9,000, ಬಂಜಾರ – 6,000, ರೆಡ್ಡಿ – 10,000 ಜನರಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಮತದಾರ ಪ್ರಭು ಯಾರಿಗೆ ಆಶೀವರ್ದಿಸಿದ್ದ ಅನ್ನೋದನ್ನು ನೋಡೋದಾದ್ರೆ, 1 ಲಕ್ಷದ 39 ಸಾವಿರದ 76 ಮತಗಳು ಚಲಾವಣೆ ಆಗಿದ್ದು ಕಾಂಗ್ರೆಸ್ ಅಭ್ಯರ್ಥಿ ಬಿ.ಬಿ. ಚಿಮ್ಮನಕಟ್ಟಿ 57, 446 ಮತ ಪಡೆದಿದ್ರು. ಜೆಡಿಎಸ್‌ನ ಮಹಾಂತೇಶ್ ಮಮದಾಪುರ 42 ಸಾವಿರದ 333 ಮತ ಪಡೆದು ಎರಡನೇ ಸ್ಥಾನ ಗಳಿಸಿದ್ರು. ಆ ಬಳಿಕ ಬಿಜೆಪಿಯ ಎಂ.ಕೆ. ಪಟ್ಟಣಶೆಟ್ಟಿ 30 ಸಾವಿರದ 310 ಮತ, ಕೆಜೆಪಿಯ ಬಸಯ್ಯ ಪ್ರಭಯ್ಯ ಅಲ್ಲೂರ 3 ಸಾವಿರದ 95 ಮತ, ಬಿಎಸ್‌ಆರ್ ಎಂ.ಎಸ್. ಪಾಟೀಲ್ 1 ಸಾವಿರದ 807 ಮತ ಪಡೆದಿದ್ದರು. ಬಿಜೆಪಿ, ಕಾಂಗ್ರೆಸ್ ಜಾತಿ ಲೆಕ್ಕಾಚಾರ ಮಾಡಿಕೊಂಡು ಚುನಾವಣೆಗಿಳಿದಿದ್ದರೆ ಜೆಡಿಎಸ್ ಕೂಡ ಗೆಲುವು ನಮ್ಮದೇ ಎನ್ನುತ್ತಿದೆ. ಹೀಗಾಗಿ ಬಾದಾಮಿ ಕಣ ಈ ಬಾರಿ ಮತ್ತಷ್ಟು ರಂಗೇರಿದೆ.

ಬಾದಾಮಿಯಲ್ಲಿ ಜೆಡಿಎಸ್ ಸ್ಥಿತಿ ಏನು?

ಯಾಕಂದ್ರೆ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಎರಡನೇ ಸ್ಥಾನ ಗಳಿಸಿದ್ದ ಮೇಲೆ ಜೆಡಿಎಸ್ ಅಲ್ಪಸ್ವಲ್ಪನೆಲೆ ಉಳಿಸಿಕೊಂಡಿದೆ. ಇದೀಗ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಬಂದಿರೋದು ತಮ್ಮ ಅಗತ್ಯಕ್ಕಾಗಿ ಒಂದು ವೇಳೆ ಅವರು ಸ್ಪರ್ಧಿಸಿರೋ ಬೇರೊಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ ಬಾದಾಮಿ ಕ್ಷೇತ್ರಕ್ಕೆ ಮತ್ತೆ ಚುನಾವಣೆ ನಡೆಯಬಹುದು. ಹೀಗಾಗಿ ಸ್ಥಳೀಯರಾದ ಜೆಡಿಎಸ್ ಅಭ್ಯರ್ಥಿಯನ್ನೇ ಗೆಲ್ಲಿಸಿಕೊಳ್ಳೋಣವೆಂದು ಜನರು ಜೆಡಿಎಸ್ ಅಭ್ಯರ್ಥಿಯನ್ನೇ ಗೆಲ್ಲಿಸಿದರೂ ಆಶ್ಚರ್ಯವಿಲ್ಲ ಎಂಬ ಮಾತೂ ಕೇಳಿ ಬಂದಿದೆ. (ಎನ್.ಬಿ)

Leave a Reply

comments

Related Articles

error: