ಮೈಸೂರು

ಮೃಗಾಲಯದಲ್ಲಿ ಪ್ರಾಣಿಗಳ ಸರಣಿ ಸಾವು ಖಂಡಿಸಿ ಅಮರಣಾಂತ ಉಪವಾಸ: ಡಿ.10ರಿಂದ

ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿನ ಅಧಿಕಾರಿಗಳ ದಬ್ಬಾಳಿಕೆ, ದೌರ್ಜನ್ಯ ಮತ್ತು ಸರ್ವಾಧಿಕಾರಿ ಧೋರಣೆ ಹಾಗೂ ಪ್ರಾಣಿಗಳ ಅನೈಸರ್ಗಿಕ ಸಾವಿನ ಬಗ್ಗೆ ಖಂಡಿಸಿ ಡಿ.10ರಿಂದ ಅಮರಣಾಂತ ಉಪವಾಸ ಕೈಗೊಳ್ಳಲಾಗುತ್ತದೆ ಎಂದು ಶಾಂತರಾಜು ಹೇಳಿದರು.

ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಧಿಕಾರಿಗಳ, ನೌಕರರ ಪರಿಷತ್ ಸಂಘದ ಗೌರವಾಧ್ಯಕ್ಷ ಶಾಂತರಾಜು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಇಂದಿನ ಅಧಿಕಾರಿಗಳಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ಕಮಲ ಐ.ಎಫ್.ಎಸ್ ಮತ್ತು ಇವರ ಮೇಲಾಧಿಕಾರಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಇವರುಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ನೌಕರರ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು ಮತ್ತು ಸರ್ವಾಧಿಕಾರಿ ಧೋರಣೆ ನಿಜಕ್ಕೂ ಖಂಡನೀಯ ಎಂದರು.

ಈ ಸಂಬಂಧ ಸಂಘವು ಮೃಗಾಲಯದ ಮುಂದೆ ಒಂದು ದಿನದ ಸಾಂಕೇತಿಕ ಧರಣಿಯನ್ನು ನಡೆಸಿ, ಮೃಗಾಲಯದ ಅಧ್ಯಕ್ಷರಾದ ಮಲ್ಲಿಗೆ ವೀರೇಶ್ ಮತ್ತು ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರವನ್ನು ನೀಡಲಾಗಿತ್ತು. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು ಸಂಘವು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಅಂದು ಬೆಳಗ್ಗೆ 10.30ಕ್ಕೆ ಬೇಡಿಕೆಗಳ ಈಡೇರಿಕೆಗೆ ಮತ್ತು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಮರಣಾಂತಿಕ ಉಪವಾಸ ಮತ್ತು ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಬೇಡಿಕೆಗಳು: ಪರಿಶಿಷ್ಟ ಜಾತಿಯ ನೌಕರರಾದ ಚಾಮರಾಜು, ಕಾಂತರಾಜು, ಬಸವರಾಜ ಮತ್ತು ಪ್ರದೀಪ್ ಇವರನ್ನು ಕ್ಷುಲ್ಲಕ ಕಾರಣಕ್ಕಾಗಿ ಅಮಾನತು ಮಾಡಿರುವುದನ್ನು ರದ್ದುಪಡಿಸಿ ಕೆಲಸಕ್ಕೆ ಬೇಷರತ್ತಾಗಿ ತೆಗೆದುಕೊಳ್ಳುವುದು. ಮತ್ತು ನೌಕರರ ಮೇಲೆ ದಬ್ಬಾಳಿಕೆ ನಡೆಸುತ್ತಾ, ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ನೌಕರರಿಗೆ ಸೂಕ್ತ ರಕ್ಷಣೆ ನೀಡುವುದು.

ಮೃಗಾಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಇವರನ್ನು ಅಮಾನತು ಮಾಡಿ ಮೃಗಾಲಯದಲ್ಲಿನ ಅವ್ಯವಸ್ಥೆಯಿಂದ ಉಂಟಾಗುತ್ತಿರುವ ಪ್ರಾಣಿಗಳ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದು ಮತ್ತು ಪ್ರಾಣಿಗಳ ಸಾವನ್ನು ನಿರ್ಲಕ್ಷಿಸದೇ ಗಂಭಿರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವುದು. ಈ ಬೇಡಿಕೆಗಳ ಈಡೇರಿಕೆಗಾಗಿ ಸಂಘದ ವತಿಯಿಂದ ಅಮರಣಾಂತಿಕ ಉಪವಾಸ ಕೈಗೊಳ್ಳಲಾಗುವುದು ಎಂದು ಆಗ್ರಹಿಸಿದರು.

Leave a Reply

comments

Related Articles

error: