ಮೈಸೂರು

ವಾಲ್ಮೀಕಿ ಭಾವಚಿತ್ರವಿದ್ದ ನಾಮಫಲಕಕ್ಕೆ ಅಪಮಾನ ಖಂಡನೀಯ: ದ್ಯಾವಪ್ಪನಾಯಕ

ಹೆಚ್.ಡಿ.ಕೋಟೆ ತಾಲೂಕಿನ ಹತ್ವಾಳು ಗ್ರಾಮದಲ್ಲಿ ವಾಲ್ಮೀಕಿ ಭಾವಚಿತ್ರವಿರುವ ನಾಮಫಲಕಕ್ಕೆ ಅಪಮಾನ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.28 ರಂದು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 19 ರಂದು ಹಾಸನದ ಬೇಲೂರಿನ ಬೇಡರ ಬಡಾವಣೆಯಲ್ಲಿ ನಾಯಕ ಸಮಾಜದವರು ನಿರ್ಮಿಸಿದ ವಾಲ್ಮೀಕಿ ಮೂರ್ತಿಯನ್ನು ಕೆಲವು ಕಿಡಿಗೇಡಿಗಳು ಧ್ವಂಸಗೊಳಿಸಿದ್ದರು. ಅದೇ ರೀತಿ ಕಳೆದ ತಿಂಗಳು ಮೈಸೂರು ತಾಲೂಕಿನ ಡಿ.ಸಾಲುಂಡಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಮಾಡುವ ಸಂದರ್ಭದಲ್ಲಿ ಗ್ರಾಮದಲ್ಲಿ ಅಳವಡಿಸಿದ್ದ ಫ್ಲೆಕ್ಸ್ ಗಳನ್ನು ಹರಿದು ಹಾಕಿ ಅವಮಾನಗೊಳಿಸಿದ್ದರು. ಹೀಗೆ ಪದೇ ಪದೇ ರಾಜ್ಯಾದ್ಯಂತ ವಾಲ್ಮೀಕಿ ಮೂರ್ತಿಯನ್ನು ಅಪಮಾನಗೊಳಿಸುವ ಕೆಲಸಗಳು ನಡೆಯುತ್ತಿರುವುದು ಒಂದು ಹೇಯ ಕೃತ್ಯವಾಗಿದೆ ಎಂದರು.

ರಾಜ್ಯ ಸರ್ಕಾರ ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ದುಷ್ಕರ್ಮಿಗಳನ್ನು ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹಂತ-ಹಂತವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಪ್ರಭಾಕರ್ ಹುಣಸೂರು, ಶ್ರೀಧರ್ ಚಾಮುಂಡಿಬೆಟ್ಟ, ಸುರೇಶ್ ಕುಮಾರಬೀಡು, ರಾಜು ಮಾರ್ಕೆಟ್, ಕೆ.ಎಸ್.ಗಣೇಶ್ ಹಾಜರಿದ್ದರು.

Leave a Reply

comments

Related Articles

error: