ಕರ್ನಾಟಕಪ್ರಮುಖ ಸುದ್ದಿ

ರಾಜ್ಯ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಮುಖ್ಯಾಂಶಗಳೇನು?

ಮಂಗಳೂರು (ಏ.27): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಮಂಗಳೂರಿನಲ್ಲಿ ಕಾಂಗ್ರೆಸ್​ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಇದು ಕಾಂಗ್ರೆಸ್ ಪ್ರಣಾಳಿಕೆ ಅಲ್ಲ. ಬದಲಾಗಿ ರಾಜ್ಯದ ಜನರ ಪ್ರಣಾಳಿಕೆ. ಇದು ಪಕ್ಷದ ಬೇಡಿಕೆಗಳಲ್ಲ, ಜನರ ಬೇಡಿಕೆಗಳು ಎಂದು ಹೇಳಿದರು.

ಬಸವಣ್ಣನ ತತ್ವಗಳನ್ನ ನಮ್ಮ ಪ್ರಣಾಳಿಕೆ ಒಳಗೊಂಡಿದೆ. ನುಡಿದಂತೆ ನಡೆ ಎಂಬುದು ಬಸವಣ್ಣನವರ ಮಾತು. ಅಂದೇ ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಏನು ಭರವಸೆ ನೀಡಿತ್ತೋ ಅದನ್ನು ಮಾಡಿದೆ ಎಂದು ತಿಳಿಸಿದರು.

ಸಿ.ಎಂ ಸಿದ್ದರಾಮಯ್ಯ ಮಾತನಾಡಿ, ಅವರು ಮೋದಿಯವರು ಗುಜರಾತ್ ನಂ.1 ಅಂತಾ ಬಡಾಯಿ ಕೊಚ್ಕೊತ್ತಿದ್ದಾರೆ. ಅದೆಲ್ಲಾ ಸುಳ್ಳು. ಕರ್ನಾಟಕ ದೇಶದಲ್ಲೇ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದರು.

ಬಿಜೆಪಿಯವರು ಎಷ್ಟೇ ಬೊಬ್ಬೆ ಹೊಡೆದುಕೊಳ್ಳಲಿ. ಆದ್ರೂ ಬಂಡವಾಳ ಹೂಡಿಕೆಯಲ್ಲಿ ನಂಬರ್ 1. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಚೆನ್ನಾಗಿಲ್ಲ ಅಂತಾ ಬೊಬ್ಬೆ ಹೊಡಿತಾರೆ. ಒಂದು ವೇಳೆ ಬಿಜೆಪಿ ಮುಖಂಡರು ಹೇಳಿದಂತೆ ರಾಜ್ಯದಲ್ಲಿ ವಾತಾವರಣ ಇದ್ರೆ, ಬಂಡವಾಳ ರಾಜ್ಯ ಹರಿದು ಬರುತ್ತಿತ್ತೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡ್ತಾರೆ. ಇಂತಹ ನೀಚ ಕೆಲಸವನ್ನ ಮನುಷ್ಯರಾದವರು ಮಾಡಲ್ಲ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನ ಬಿಜೆಪಿಯವರು ಕೋಮುವಾದದ ಪ್ರಯೋಗಶಾಲೆ ಮಾಡಿದ್ದಾರೆ. ಇಲ್ಲಿ ಕೋಮುವಾದ ಹಬ್ಬಿಸುತ್ತಿದ್ದಾರೆ. ಅವರು ಎಷ್ಟೇ ಕೋಮುವಾದ ಬಿತ್ತಿದರೂ ನೀವು ಜ್ಯಾತ್ಯತೀತೆಯನ್ನು ಎತ್ತಿಹಿಡಿದಿದ್ದೀರಿ ನಿಮಗೆ ಸೆಲ್ಯೂಟ್ ಸೆಲ್ಯೂಟ್ ಎಂದರು.

ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ಮಾತನಾಡಿ, ಪ್ರಣಾಳಿಕೆಯಲ್ಲಿ ಕೃಷಿಗೆ ಮೊದಲ ಆದ್ಯತೆ. ಆರೋಗ್ಯಕ್ಕೆ ನಮ್ಮ ಆದ್ಯತೆ, ರಾಜ್ಯದ ಅಭಿವೃದ್ಧಿಗೆ ನಮ್ಮ ಮೊದಲ ಆದ್ಯತೆ. ಪ್ರಣಾಳಿಕೆ ಅಂದ್ರೆ ಹೀಗಿರಬೇಕು ಎಂದು ಬಿಜೆಪಿಯವರಿಗೆ ಹೇಳುವಂತ ಪ್ರಣಾಳಿಕೆಯನ್ನು ಪಕ್ಷ ಸಿದ್ಧಪಡಿಸಿದೆ ಎಂದರು.

ಕಾಂಗ್ರೆಸ್​ ಪಕ್ಷದ ಪ್ರಣಾಳಿಕೆಯ ಪ್ರಮುಖಾಂಶಗಳು:

ವಲಸಿಗ ಕಾರ್ಮಿಕರಿಗೆ ಅನ್ನಭಾಗ್ಯ ಯೋಜನೆ ವಿಸ್ತರಣೆ, ದೇವನಹಳ್ಳಿಯಲ್ಲಿ ಐಟಿ ಪಾರ್ಕ್​ ಸ್ಥಾಪನೆ, ಶಿಡ್ಲಘಟ್ಟದಲ್ಲಿ ಹಾರ್ಡ್​ವೇರ್​ ಪಾರ್ಕ್​ ಸ್ಥಾಪನೆ, ರಾಜ್ಯದ ಎಲ್ಲ ಗ್ರಾಮಗಳಿಗೆ ರಸ್ತೆ ಸಂಪರ್ಕ, ಮನೆ ಮನೆ- ಹೊಲ ಹೊಲಕ್ಕೆ ನೀರು ಯೋಜನೆ, ನೀರಿಂಗಿಸುವ ಮೂಲಕ ಬರಮುಕ್ತ ಕರ್ನಾಟಕ ನಿರ್ಮಾಣ, ನೀರಾವರಿಗೆ 1 ಲಕ್ಷದ 25 ಸಾವಿರ ಕೋಟಿ ರೂ., ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಗುರಿ. ಕೃಷ್ಣಾ ಮೇಲ್ದಂಡೆ 3ನೇ ಹಂತದ ವಿಸ್ತರಣೆ. ಬೆಂಗಳೂರಿನ 192 ಕೆರೆಗಳ ಪುನಶ್ಚೇತನ.

ರಾಜ್ಯದಲ್ಲಿ ಹೊಸದಾಗಿ ಮಾಂಗಲ್ಯ ಭಾಗ್ಯ ಜಾರಿ, ನಾಗರಿಕ ಹಕ್ಕು ರಕ್ಷಣೆಗೆ ಸಿವಿಲ್​ ರೈಟ್ಸ್​ ಕ್ಲಬ್​ ರಚನೆ, ಬೆಂಗಳೂರಿನಲ್ಲಿ ಕನ್ನಡ ಭವನ ಸ್ಥಾಪನೆ, ಪ್ರತಿ ಹೋಬಳಿಯಲ್ಲಿ ರೈತ ಜನ ಸಂಪರ್ಕ ಕಾರ್ಯಕ್ರಮ ಸ್ಥಾಪನೆ, ಎಲ್ಲಾ ಗ್ರಾ.ಪಂ.ಗಳಲ್ಲೂ ಸೈಬರ್​ ಕೆಫೆ, ಡಿಜಿಟಲ್​ ಲೈಬ್ರರಿ, ರಾಜ್ಯದಲ್ಲಿ ಕ್ಯಾನ್ಸರ್​ ಪತ್ತೆ ಕೇಂದ್ರಗಳ ಸ್ಥಾಪನೆ, ಕೊಳೆಗೇರಿಗಳಲ್ಲಿ ‘ನೆರೆಹೊರೆ’ ಕ್ಲಿನಿಕ್​ಗಳ ಸ್ಥಾಪನೆ.

ವಿದ್ಯಾಸಿರಿ ಯೋಜನೆ ಎಲ್ಲಾ ಮಕ್ಕಳಿಗೂ ವಿಸ್ತರಣೆ, ಕಾಲೇಜು, ಯುನಿವರ್ಸಿಟಿಗಳಲ್ಲಿ ಉಚಿತ ವೈಫೈ, ಪ್ರತಿ ಜಿಲ್ಲೆಯಲ್ಲೂ IAS, KAS ಕೋಚಿಂಗ್​ ಸೆಂಟರ್​, ಧಾರವಾಡದಲ್ಲಿ ಸಾಹಿತ್ಯ ಭಾಷಾ ಪ್ರಾಧಿಕಾರ ರಚನೆ, ಮೈಸೂರಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ, ಕ್ರೀಡೆ, ಯೋಗ ಶಿಕ್ಷಣ ಕಡ್ಡಾಯ ಪಠ್ಯ, ಸ್ಯಾನಿಟರಿ ಪ್ಯಾಡ್​ ಮೇಲಿನ ತೆರಿಗೆ ಹಿಂತೆಗೆತ, ಬಿಪಿಎಲ್​ ಕಾರ್ಡ್​ದಾರರಿಗೆ ಉಚಿತ ಸ್ಯಾನಿಟರಿ ಪ್ಯಾಡ್. ಬಡ ಯುವತಿಯ ಮದುವೆಗೆ ಉಚಿತ ಮಂಗಳಸೂತ್ರ.

ಕೃಷಿ ಉತ್ಪನ್ನ ಕೈಗಾರಿಕೆಗಳಿಗೆ ಶೇ.100 ತೆರಿಗೆ ಸಬ್ಸಿಡಿ, 3 ಜಿಲ್ಲೆಗಳಲ್ಲಿ 2 ಕಡೆ ಮೀನು ಸಂಸ್ಕರಣಾ ಪಾರ್ಕ್​ಗಳ ಸ್ಥಾಪನೆ, ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಸ್ಥಾಪನೆ. ಪ್ಲಾಂಟೇಷನ್​ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್​ಶಿಪ್​. ಪಿಯುಸಿಯವರೆಗೆ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷ, ಶಾಲೆ ಬಿಟ್ಟ ಮಕ್ಕಳಿಗೆ ರೆಸಿಡೆನ್ಷಿಯನ್​ ಸ್ಕೂಲ್​ ಸ್ಥಾಪನೆ. ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್​ ಫೋನ್. ರಾಜ್ಯದ 4 ವಿಭಾಗಗಳಲ್ಲೂ ಸೈನಿಕ್​ ಶಾಲೆ ಸ್ಥಾಪನೆ. ಪಠ್ಯಪುಸ್ತಕ ರಚನಾ ಪ್ರಾಧಿಕಾರ ಸ್ಥಾಪನೆ.

ರಾಜ್ಯದ ಉದ್ದಗಲಕ್ಕೂ ರಸ್ತೆಗಳ ಅಭಿವೃದ್ಧಿ, ರೈತರ ಆದಾಯ ದ್ವಿಗುಣಗೊಳಿಸುವ ಗುರಿ, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪ್ರಣಾಳಿಕೆಯಲ್ಲಿ ಒತ್ತು. 2025ರೊಳಗೆ ನವಕರ್ನಾಟಕ ನಿರ್ಮಾಣಕ್ಕೆ ಆದ್ಯತೆ ಕೃಷಿಕರ ಬೆಳೆನಾಶ ಪರಿಹಾರಕ್ಕೆ ‘ಅನ್ನದಾತ ಫಂಡ್​’ ಸ್ಥಾಪನೆ, ಕೃಷಿಗೆ 24 ಗಂಟೆ ವಿದ್ಯುತ್​ ನೀಡುವ ಗುರಿ, ರಾಜ್ಯದ 4 ಕಡೆ ಅಕ್ಕಿ ಸಂಶೋಧನಾ ಕೇಂದ್ರ ಸ್ಥಾಪನೆ, ರಾಯಚೂರು, ಕೊಪ್ಪಳ, ಗಂಗಾವತಿ, ಕುಷ್ಟಗಿಯಲ್ಲಿ ಕೇಂದ್ರ ಸ್ಥಾಪನೆಗೆ ಒತ್ತು.

ಕೋಮುವಾದ ತಡೆಗೆ ಕಾನೂನು ಜಾರಿ, ಯುಪಿಎ ಅವಧಿಯಲ್ಲಿ ರೂಪಿಸಲಾದ ಕಾನೂನು, ಕೋಮು ಸಂಘರ್ಷ ತಡೆ, ನಿಯಂತ್ರಣ, ಪುನರ್ವಸತಿ ಕಾಯ್ದೆ, ಎಲ್ಲಾ ಜಿಲ್ಲೆಗಳಲ್ಲೂ ಲೇಬರ್​ ಕೋರ್ಟ್​ಗಳ ಸ್ಥಾಪನೆ, ಪ್ರತಿ ಗ್ರಾ.ಪಂ.ನಲ್ಲೂ ಒಂದು ಸ್ಮಾರ್ಟ್​ ವಿಲೇಜ್​, ಗ್ರಾ.ಪಂ., ತಾ.ಪಂ.ಗಳ ಅನುದಾನ ಮೊತ್ತ ಹೆಚ್ಚಳ, ಹುತಾತ್ಮ ಯೋಧರ ಅವಲಂಬಿತರಿಗೆ ಸರ್ಕಾರಿ ಉದ್ಯೋಗ.

ಶಿರಾಡಿ ಘಾಟ್​ನಲ್ಲಿ ಸುರಂಗ ಮಾರ್ಗ ನಿರ್ಮಾಣ, ಪ್ರತಿ ವರ್ಷ 15ರಿಂದ 20 ಲಕ್ಷ ಉದ್ಯೋಗ ಸೃಷ್ಟಿ. ಯುವಕರಿಗಾಗಿ ಕೌಸಲ್ಯ ಕರ್ನಾಟಕ, ಅಂತರ್​ಪ್ರೇರಣ, ಪ್ರಯುಕ್ತೆ ಯೋಜನೆಗಳ ಜಾರಿ, ಬಡತನ ರೇಖೆಯ ಗರಿಷ್ಠ ಆದಾಯ ಮಿತಿ 2 ಲಕ್ಷಕ್ಕೆ ಏರಿಸುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. (ಎನ್.ಬಿ)

Leave a Reply

comments

Related Articles

error: