ಮೈಸೂರು

ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ: ಮಹಾನಗರ ಪಾಲಿಕೆ ಆಯುಕ್ತ ಜೆ. ಜಗದೀಶ್

“ಮೈಸೂರು ದೇಶದಲ್ಲಿಯೇ ಸುಂದರ ಹಾಗೂ ಸ್ವಚ್ಛನಗರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದರಿಂದ ಪ್ರತಿಯೊಬ್ಬರಿಗೂ ಹೆಚ್ಚಿನ ಜವಾಬ್ದಾರಿ ಇದೆ. ಸ್ವಚ್ಛತೆಗೆ ಗಮನಹರಿಸಿ, ಸೂಕ್ತ ತ್ಯಾಜ್ಯ ನಿರ್ವಹಣೆ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ಹೀಗಾಗಿ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲಾಗಿದ್ದು, ನಿಯಮಾವಳಿ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಜೆ. ಜಗದೀಶ್ ಎಚ್ಚರಿಸಿದರು.

ಅವರು ನಗರದ ಸಿಪಾಯಿ ಗ್ರಾಂಡ್ ಹೋಟೆಲ್‍ನಲ್ಲಿ ಶುಕ್ರವಾರ ನಡೆದ ಮೈಸೂರು ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. “ನಗರದಲ್ಲಿ 410 ಪಾರ್ಕ್‍ಗಳಿದ್ದು ಸುಮಾರು 75 ರಿಂದ 80 ಪಾರ್ಕ್‍ಗಳನ್ನು ಮಹಾನಗರಪಾಲಿಕೆ ಹಾಗೂ ಇತರೆ ಖಾಸಗಿಯವರ ಮೂಲಕ ನಿರ್ವಹಿಸಲಾಗುತ್ತಿದೆ. ಇನ್ನುಳಿದ ಪಾರ್ಕ್‍ಗಳು ನಿರ್ವಹಣೆಯಿಲ್ಲದೆ ಸೊರಗುತ್ತಿದ್ದು ಅಂತಹ ಪಾರ್ಕ್‍ ಹಾಗೂ ವೃತ್ತಗಳನ್ನು ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಲು ದಾನಿಗಳು ಮುಂದೆ ಬರಬೇಕೆಂದು ಹೋಟೆಲ್ ಮಾಲೀಕರ ಸಂಘಕ್ಕೆ ಮನವಿ ಮಾಡಿದರು. ಈಗಾಗಲೇ ಹೆದ್ದಾರಿ ವೃತ್ತವನ್ನು ಗ್ರಾಂಡ್ ಮರ್ಕ್ಯೂರಿ ಹಾಗೂ ಮಿಲೇನಿಯಂ ವೃತ್ತವನ್ನು ಜೆ.ಕೆ.ಟೈರ್ಸ್ ಕಂಪನಿಯವರು ನಿರ್ವಹಿಸುತ್ತಿದ್ದಾರೆ. ಇದೇ ರೀತಿ ಪಾರ್ಕ್ ಅನ್ನು ದತ್ತು ಪಡೆದು ನಿರ್ವಹಿಸಿ ಸಂಸ್ಥೆಯ ಹೆಸರಿನ ಜಾಹೀರಾತನ್ನು ಆ ಸ್ಥಳದಲ್ಲಿ ಹಾಕಿ ಪ್ರಚಾರ ಮಾಡಲಾಗುವುದು ಎಂದರು. ಆಸಕ್ತರು ಮನವಿ ನೀಡಿದರೆ ಎರಡು ವರ್ಷ ಹಾಗೂ ಅದಕ್ಕಿಂತಲೂ ಹೆಚ್ಚಿನ ಸಮಯ ನಿರ್ವಹಣಾ ಜವಾಬ್ದಾರಿಯನ್ನು ನೀಡುವುದಕ್ಕೆ ಪಾಲಿಕೆ ವತಿಯಿಂದ ಕ್ರಮಕೈಗೊಳ್ಳಲಾಗುವುದು. ಹೋಟೆಲ್ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಂಡು ಸ್ವಚ್ಛ ಮೈಸೂರಿಗೆ ಕೈಜೋಡಿಸಿ ಎಂದು ಕರೆ ನೀಡಿದರು.

ರಾಜರ ಕಾಲದಲ್ಲೇ ಉತ್ತಮ ಒಳಚರಂಡಿ ವ್ಯವಸ್ಥೆ, ಸೂಕ್ತ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಿ ಉತ್ತಮ ನಿರ್ವಹಣೆ ಹಾಗೂ ಕ್ರಮಬದ್ಧ ಯೋಜನೆಗಳನ್ನು ಅನುಷ್ಠಾನಗೊಳಿದ್ದ ಕಾರಣ ಮೈಸೂರು ನಗರದಲ್ಲಿ ಸ್ವಚ್ಛ ಪರಿಸರ ಕಾಪಾಡಿಕೊಳ್ಳಲು ಸಹಾಯವಾಯಿತು. ಬೇರೆ ಕಡೆಗೆ ಹೋಲಿಸಿದಲ್ಲಿ ಮೈಸೂರಿನ ಜನತೆ ಸ್ವಚ್ಛತೆಯ ನೀತಿ ನಿಯಮಗಳನ್ನು ಹೆಚ್ಚು ಪಾಲಿಸುತ್ತಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಿಯಮಾವಳಿ ರೂಪಿಸುವ ಮೂಲಕ ನಾವು ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ ಎಂದರು.

ಘನತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಿಸಿದೇ ಇದ್ದರೆ ಮುಂದಿನ ದಿನಗಳಲ್ಲಿ ಫಲವತ್ತಾದ ಭೂಮಿಯೆಲ್ಲಾ ಕಸ ಸುರಿಯುವ ಜಾಗಗಳಾಗಲಿವೆ. ಈಗಾಗಲೇ ಚಾಮುಂಡಿ ತಪ್ಪಲಿನ ವಿದ್ಯಾರಣ್ಯಪುರಂನಲ್ಲಿ ಬೃಹತ್ ಕಸದ ಬೆಟ್ಟ ನಿರ್ಮಾಣವಾಗಿದ್ದು ಇದೇ ರೀತಿ ಮುಂದುವರೆದರೆ ನಗರದಲ್ಲಿ ಕಸದ ಬೆಟ್ಟಗಳೇ ತುಂಬುವವು. ‘ಗಾರ್ಡನ್ ಸಿಟಿ’ಯಾಗಿದ್ದ ಬೆಂಗಳೂರು ‘ಗಾರ್ಬೇಜ್ ಸಿಟಿ’ಯಾಗಿದೆ ಎಂದು ವಿಷಾದಿಸಿದರು.

ಗೋಡೆ ಬರಹ, ಫ್ಲೆಕ್ಸ್ ಹಾಕಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲ. ಹಾಗೊಮ್ಮೆ ಹಾಕಿದರೆ ಕಾಯ್ದೆ ಉಲ್ಲಂಘನೆಯಾಗುವುದು. ಇಲ್ಲಿನ ಜನರು ಕಾನೂನು ಪಾಲಿಸುವುದರಿಂದ ಸ್ವಚ್ಛ ನಗರದ ಗರಿ ಮೂಡಿದ್ದು, ಸೂಕ್ತ ಕಸ ನಿರ್ವಹಣೆಗೆ ಮೊಬೈಲ್ ಆ್ಯಪ್ ಇದ್ದು ಸಮರ್ಪಕವಾಗಿ ಬಳಸಿ ಮೂರು ವಿಧಾನಸಭಾ ಕ್ಷೇತ್ರಗಳಿಗೂ ಬೇರೆ 9 ಟೀಮ್‍ಗಳನ್ನು ಮಾಡಲಾಗಿದೆ. ರಾತ್ರಿ ಸ್ಲೀಪಿಂಗ್ ಕೆಲಸ ಮಾಡುವುದು ಉತ್ತಮವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೆಡಿಟರೇನಿಯನ್ ಹೋಟೆಲ್ ವ್ಯವಸ್ಥಾಪಕ ಪ್ರವೀಣ್, ಅಧ್ಯಕ್ಷ ನಾರಾಯಣಗೌಡ, ರವಿಶಾಸ್ತ್ರಿ, ರವೀಂದ್ರ ಭಟ್, ಯಶಸ್ವಿನಿ ಸೋಮಶೇಖರ್, ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು.

Leave a Reply

comments

Related Articles

error: