ಮೈಸೂರು

ರಂಗ ಪ್ರಯೋಗಗಳು ನಡೆದರೆ ಆರೋಗ್ಯಪೂರ್ಣ ಪರಿಸರ ನಿರ್ಮಾಣವಾಗಲಿದೆ : ಮಂಡ್ಯ ರಮೇಶ್

ಹವ್ಯಾಸಿ ರಂಗಕರ್ಮಿಗಳ ವೈಚಾರಿಕ ಚಿಂತನೆ, ವಿಚಾರಶೀಲತೆ ಹಾಗೂ ವೃತ್ತಿ ರಂಗಕರ್ಮಿಗಳ ಬದ್ಧತೆಯ ಸಮ್ಮಿಲನದಿಂದ ನಿರಂತರವಾಗಿ ರಂಗಪ್ರಯೋಗಗಳು ನಡೆಯಬೇಕು. ಇದರಿಂದ ಆರೋಗ್ಯಪೂರ್ಣ ಪರಿಸರ ನಿರ್ಮಾಣವಾಗಲಿದೆ ಎಂದು ಹಿರಿತೆರೆ, ಕಿರುತೆರೆ ಕಲಾವಿದ ಮಂಡ್ಯ ರಮೇಶ್ ಹೇಳಿದರು.

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಪ್ರಶಸ್ತಿ ಪುರಸ್ಕೃತ ರಂಗಕರ್ಮಿಗಳ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡ ಮಂಡ್ಯ ರಮೇಶ್ ಮಾತನಾಡಿದರು.

ರಂಗಭೂಮಿ ಕ್ಷೇತ್ರದಲ್ಲಿ ವೃತ್ತಿ ಮತ್ತು ಹವ್ಯಾಸಿ ಎಂದು ಎರಡು ವಿಭಾಗವಾಗಿದ್ದು, ಹವ್ಯಾಸಿ ಮತ್ತು ವೃತ್ತಿ ರಂಗಕರ್ಮಿಗಳು ಒಂದೇ ಸ್ಥಳದಲ್ಲಿ ಸಮ್ಮಿಲನವಾಗಿ ರಂಗಪ್ರಯೋಗ ಮಾಡಿ ರಂಗ ಚಳುವಳಿಗೆ ಶಕ್ತಿ ತುಂಬಬೇಕು ಎಂದು ತಿಳಿಸಿದರು. ರಂಗಾಯಣ ನಿರ್ಮಾಣವಾಗುವುದಕ್ಕೆ ಮೂಲ ಅಂದಿನ ಹವ್ಯಾಸಿ ರಂಗಕರ್ಮಿಗಳೇ ಕಾರಣ ಎಂದು ತಿಳಿಸಿದ ಅವರು ಮೈಸೂರು ರಂಗಭೂಮಿಯು ಕರ್ನಾಟಕದಲ್ಲಿ ಕೇಂದ್ರಬಿಂದುವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿ.ವಿಕಾರಂತ ಪ್ರಶಸ್ತಿ ಪುರಸ್ಕೃತರಾದ ಡಾ.ನ.ರತ್ನ, ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸರೋಜಿನಿ, ಚಂದನವಾಹಿನಿ ಪ್ರಶಸ್ತಿಪುರಸ್ಕೃತ ಮೈಮ್ ರಮೇಶ್, ಅರೆಭಾಷೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಗೀತ ಮೊಂಟಡ್ಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮೇಶ್ವರಿ ವರ್ಮಾ ಮತ್ತು ಗುರುರಾಜ್ ದಂಪತಿಯನ್ನು ಸನ್ಮಾನಿಸಲಾಯಿತು.

ರಂಗಕರ್ಮಿಗಳಾದ ರಾಮನಾಥ್, ನಾಟಕ ಅಕಾಡಮಿ ಸದಸ್ಯ ರಾಮಚಂದ್ರ, ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಅಧ್ಯಕ್ಷ ಸುರೇಶ್ ಬಾಬು , ಬಿ.ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: