
ಮೈಸೂರು
ಸಂಗೀತ ನಾದೋಪಾಸನೆಯ ಮಾರ್ಗ: ಆತ್ಮಾನಂದಜೀ
ಸಂಗೀತ ನಾದೋಪಾಸನೆಯ ಮಾರ್ಗವಾಗಿದ್ದು, ಸಂಗೀತ ಕೇಳುತ್ತಿದ್ದರೆ ಭಕ್ತಿ-ಭಾವ ಮೇಳೈಸಬೇಕು ಎಂದು ರಾಮಕೃಷ್ಣಾಶ್ರಮದ ಮೈಸೂರು ಶಾಖೆ ಅಧ್ಯಕ್ಷ ಸ್ವಾಮಿ ಆತ್ಮಾನಂದಜೀ ಮಹಾರಾಜ್ ತಿಳಿಸಿದರು.
ಮೈಸೂರಿನ ಜೆ.ಎಸ್.ಎಸ್. ಸಂಗೀತ ಸಭಾ ಟ್ರಸ್ಟ್ ವತಿಯಿಂದ ಜೆ.ಎಸ್.ಎಸ್. ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ 23ನೇ ಸಂಗೀತ ಸಮ್ಮೆಳನವನ್ನು ಆತ್ಮಾನಂದಜೀ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಂಗೀತ ಕೇವಲ ಮನರಂಜನೆಗಾಗಿ ಮಾತ್ರವಲ್ಲ. ಅದು ಸಾಧನೆ ಮತ್ತು ಭಗವಂತನ ಸೇವೆಗಾಗಿ ಮಾತ್ರ ಎಂದರು. ಜೆ.ಎಸ್.ಎಸ್. ಸಂಸ್ಥೆ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದು, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ. ಇಂದು ಆಧ್ಯಾತ್ಮಿಕ ಸಂಸ್ಥೆಗಳು ಹಿಂದೆ ಮಹಾರಾಜರು ಮಾಡುತ್ತಿದ್ದ ಕಾರ್ಯಗಳನ್ನು ಮಾಡುತ್ತಿವೆ ಎಂದು ಹೇಳಿದರು.
ವಿದ್ವಾನ್ ಟಿ.ಎ.ಎಸ್. ಮಣಿ ಸಂಗೀತ ವಿದ್ವಾಂಸ ವಿದ್ಯಾಭೂಷಣರ ನಾದನಮನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಸಂಗೀತವು ಭಗವಂತನೆಡೆಗೆ ನಮ್ಮನ್ನು ಒಯ್ಯುವ ಒಂದು ಕಲೆ ಎಂದರು.
ಕಾರ್ಯಕ್ರಮದಲ್ಲಿ ಕಲಾವಿದ ಕೆ.ಎಸ್.ಎಸ್. ಪ್ರಸಾದ್ ಅವರಿಗೆ ಸಂಗೀತ ಸೇವಾನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಾಯನ ಕ್ಷೇತ್ರದಲ್ಲಿ ಎಚ್.ಎಸ್. ಬಾಲಕೃಷ್ಣ, ಮೃದಂಗದಲ್ಲಿ ಎಂ. ವಾಸುದೇವರಾವ್, ವೇಣುವಾದನದಲ್ಲಿ ಟಿ.ಆರ್. ಶ್ರೀನಾಥ್, ಸಂಗೀತ ಶಾಸ್ತ್ರದಲ್ಲಿ ಡಾ. ಗೀತಾ ಸೀತಾರಾಮ್, ಕಲಾ ಪೋಷಣೆಯಲ್ಲಿ ಪುಷ್ಪಾ ಅಯ್ಯಂಗಾರ್, ವೈದೇಹಿ ಅಯ್ಯಂಗಾರ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆ.ಎಸ್.ಎಸ್. ಸಂಗೀತ ಸಭಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಡಿಸೆಂಬರ್ 6 ರ ವರೆಗೆ ಸಂಗೀತ ಸಮ್ಮೇಳನ ನಡೆಯಲಿದೆ.