ಕರ್ನಾಟಕ

ಪರವಾನಗಿ ಆಧಾರದ ಮೇಲೆ ರಿವರ್ ರ್ಯಾಫ್ಟಿಂಗ್ : ಸಲಹೆ ನೀಡಿದ ಜಿಲ್ಲಾಧಿಕಾರಿ

ರಾಜ್ಯ(ಮಡಿಕೇರಿ) ಏ.30 :- ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಅನುಮತಿ ರಹಿತವಾಗಿ ರಿವರ್ ರ್ಯಾಫ್ಟಿಂಗ್ ಉದ್ದಿಮೆ ನಡೆಸುತ್ತಿರುವ ಹಿನ್ನಲೆಯಲ್ಲಿ ಫೆ. 28. 2018 ರಿಂದ ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಆದರೆ ಇತ್ತೀಚೆಗೆ ಈ ಪ್ರಕರಣದ ಕುರಿತು ವಿಚಾರಣೆ ನಡೆಸಿ ರ್ಯಾಫ್ಟ್ ಮಾಲೀಕರು, ಸಂಬಂಧಪಟ್ಟ ಇಲಾಖೆ ಮತ್ತು ಸಂಸ್ಥೆಗಳ ಅಧಿಕಾರಿಗಳು ಸಲ್ಲಿಸಿದ ದಾಖಲಾತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಜಿಲ್ಲಾಧಿಕಾರಿಗಳು ಅಂತಿಮ ಆದೇಶ ಹೊರಡಿಸಿದ್ದಾರೆ.

ಈ ಆದೇಶದಂತೆ ಜಿಲ್ಲೆಯ ಕಾನೂನು ಸುವ್ಯವಸ್ಥೆ, ಸ್ಥಳೀಯರ ಹಾಗೂ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಹಾಗೂ ರಿವರ್ ರ್ಯಾಫ್ಟಿಂಗ್ ಉದ್ದಿಮೆಯಲ್ಲಿ ತೊಡಗಿರುವ ನೌಕರರ ಹಿತರಕ್ಷಣೆಯ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಕಾವೇರಿ ನದಿಯಲ್ಲಿ ಮತ್ತು ಇನ್ನಿತರೆ ನದಿಪಾತ್ರ ಹಾಗೂ ಇನ್ನಿತರ ಭಾಗಗಳಲ್ಲಿ ಅನುಮತಿ ರಹಿತವಾಗಿ ರಿವರ್ ರ್ಯಾಫ್ಟಿಂಗ್ ಉದ್ದಿಮೆ ನಡೆಸುವುದನ್ನು ಸಿ.ಆರ್.ಪಿ.ಸಿ ಕಲಂ 133 ರಡಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರಿಗೆ ದತ್ತವಾದ ಅಧಿಕಾರದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗುತ್ತಿರುವ ‘ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ’ಯ ಅನುಮತಿ / ಪರವಾನಗಿಯ ಆಧಾರದ ಮೇಲೆ ಸಾಹಸ ಕ್ರೀಡೆ/ ರಿವರ್ ರ್ಯಾಫ್ಟಿಂಗ್ ನಡೆಸಲು ಅವಕಾಶ ಕಲ್ಪಿಸಲಾಗಿರುತ್ತದೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ‘ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ’ಯನ್ನು ರಚಿಸಲಾಗುತ್ತಿದ್ದು, ಹಾಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ರ ಪ್ರಕ್ರಿಯೆ ಚಾಲ್ತಿಯಲ್ಲಿರುವ ಕಾರಣ ದಿನಾಂಕ 20.05.2018ರ ಒಳಗಾಗಿ ಪ್ರಥಮ ಸಭೆಯನ್ನು ನಡೆಯಲಿದೆ. ಸಮಿತಿ ಅಂತಿಮಗೊಳಿಸುವ ಮಾರ್ಗಸೂಚಿಯಂತೆ ರಿವರ್ ರ್ಯಾಫ್ಟಿಂಗ್ ನಡೆಸಲು ಇಚ್ಛಿಸುವವರು, ಈ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಸಹಾಯಕ ನಿರ್ದೇಶಕರು, ಜಿಲ್ಲಾ ಪ್ರವಾಸೋದ್ಯಮ ಸಮಿತಿ, ಮಡಿಕೇರಿ ಇವರಿಗೆ ಅರ್ಜಿ ಸಲ್ಲಿಸಿ, ಸಮಿತಿಯ ಅನುಮತಿ/ಪರವಾನಗಿಯ ಆಧಾರದ ಮೇಲೆ ಸಾಹಸ ಕ್ರೀಡೆ/ರಿವರ್ ರ್ಯಾಫ್ಟಿಂಗ್ ನಡೆಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: