
ಕರ್ನಾಟಕ
ಸಾಧನೆಗೆ ಆತ್ಮಸ್ಥೈರ್ಯವೇ ಬಹಳ ಮುಖ್ಯ ಎಂಬುದನ್ನು ತೋರಿಸಿಕೊಟ್ಟ ಛಲಗಾತಿ ಸೋನಿಯಾ ಸಿಂಗ್
ಬೆಂಗಳೂರು,ಏ.30-ರೋಗ ಕೆಲ ವ್ಯಕ್ತಿಗಳಲ್ಲಿ ಬದುಕುವ ಆಸೆಯನ್ನೇ ಕೊನೆಗೊಳಿಸಿದರೆ ಕೆಲ ವ್ಯಕ್ತಿಗಳಲ್ಲಿ ರೋಗಕ್ಕೆ ಸೆಡ್ಡು ಹೊಡೆದು ಬದುಕಬೇಕೆಂಬ ಆತ್ಮಸ್ಥೈರ್ಯ ತುಂಬುತ್ತದೆ. ಇಲ್ಲಿ ಈ ಮಹಿಳೆ ಎರಡನೇ ಸಾಲಿಗೆ ಸೇರುತ್ತಾರೆ. ರೋಗಕ್ಕೆ ತುತ್ತಾಗಿರುವುದು ತಿಳಿದಿದ್ದರೂ ಇವರಲ್ಲಿನ ಆತ್ಮಸ್ಥೈರ್ಯ ಸ್ವಲ್ಪವೂ ಕುಗ್ಗಿಲ್ಲ.
ಮೆದುಳಿನ ಕಾಂಡದಲ್ಲಿ ಸಿಸ್ಟಿಕ್ ಟ್ಯೂಮರ್ ರೋಗಕ್ಕೆ ತುತ್ತಾಗಿರುವ ಸೋನಿಯಾ ಸಿಂಗ್ ಎಲ್ಲವನ್ನೂ ಮೀರಿ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಈ ವರ್ಷ ‘ಮಿಸೆಸ್ ಇಂಡಿಯಾ ಕರ್ನಾಟಕ ಕಾಂಜೆನಿಯಾಲಿಟಿ 2018 ‘ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸ್ಪರ್ಧೆಗಾಗಿ ಸೋನಿಯಾ ಹೈ ಹೀಲ್ಸ್ ಧರಿಸಿ ನಡೆಯಬೇಕಿತ್ತು. ತಲೆಯು ಸ್ಪೀನಲ್ ಕಾರ್ಡ್ ಚಟುವಟಿಕೆಗಳ ಮೇಲೆ ನಿಯಂತ್ರಣ ಹೊಂದಿರುವುದರಿಂದ ಹೈ ಹೀಲ್ಸ್ ಧರಿಸಿ ದೀರ್ಘ ಕಾಲ ನಿಲ್ಲುವುದು ಮತ್ತು ನಡೆಯುವುದು ಬಹಳಷ್ಟು ತ್ರಾಸದಾಯಕ ಹಾಗೂ ಪಾದಗಳ ಊತಕ್ಕೂ ಕಾರಣವಾಗಿತ್ತು. ಆದರೂ ಪಟ್ಟು ಬಿಡದೆ ತೊಡಗಿಸಿಕೊಂಡ ಸೋನಿಯಾ ಅವರಿಗೆ ನಿದ್ದೆ, ವಿಶ್ರಾಂತಿಯ ಕೊರತೆಯಿಂದ ಸ್ಪರ್ಧೆಯ ದಿನ ಮುಖ ಊದಿಕೊಂಡಿತ್ತು.
ಗಗನಸಖಿಯಾಗಿಯಾಗಿದ್ದ ಸೋನಿಯಾ ಅವರಿಗೆ ಐದು ವರ್ಷದ ಹಿಂದೆ ಭುಜ ನೋವು ಮತ್ತು ತಲೆ ನೋವು ಕಾಣಿಸಿಕೊಳ್ಳಲಾರಂಭಿಸಿತ್ತು. ಕೊನೆಗೆ ಆಹಾರ ನುಂಗುವುದು ಕೂಡ ಕಠಿಣವಾಯಿತು. 2013 ರಲ್ಲಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಡಾ. ವೆಂಕಟರಮಣ ಅವರಲ್ಲಿ ಚಿಕಿತ್ಸೆಗಾಗಿ ಹೋದಾಗ ಪರೀಕ್ಷೆಯಲ್ಲಿ ಮೆದುಳಿನ ಕಾಂಡದಲ್ಲಿ ಸಿಸ್ಟಿಕ್ ಟ್ಯೂಮರ್ ಇರುವುದು ಪತ್ತೆಯಾಗಿದೆ. ಆದರೆ ಇದು ಮೆದುಳು ಕಾಂಡದಲ್ಲಿ ಆಗಿರುವ ಗಡ್ಡೆಯಾದ್ದರಿಂದ ಆಪರೇಷನ್ ಕೂಡ ಕಷ್ಟವಾಗಿತ್ತು. ಇದನ್ನು ತಿಳಿದ ಮೂರು ತಿಂಗಳ ಮಗುವಿನ ತಾಯಿ ಸೋನಿಯಾ ಧೃತಿಗೆಡದೆ ಧೈರ್ಯವಾಗಿ ಮುಂದಿನ ಹೆಜ್ಜೆಯಿಟ್ಟರು. ಎಲ್ಲವನ್ನೂ ಧನಾತ್ಮಕವಾಗಿ ಸ್ವೀಕರಿಸಿ ವ್ಯಕ್ತಿತ್ವನ್ನೇ ಬದಲಾಯಿಸಿಕೊಂಡು ಒಂದು ಕಂಪೆನಿಯನ್ನು ಕೂಡ ಆರಂಭಿಸಿದರು. ಈಗ ಉದ್ಯಮಿಯಾಗಿ ಧೈರ್ಯ ಕಳೆದುಕೊಂಡವರಿಗೆ ಭರವಸೆ ತುಂಬುವ ಭಾಷಣಗಳಲ್ಲೂ ತೊಡಗಿಸಿಕೊಂಡಿದ್ದಾರೆ. (ಎಂ.ಎನ್)