
ಮೈಸೂರು
ಮೈಸೂರಿನಲ್ಲಿ ಬಡವರ ವೈದ್ಯರೆಂದೇ ಖ್ಯಾತರಾಗಿದ್ದ ಡಾ.ಬೆಳ್ಳಿಪ್ಪಾಡಿ ಸತೀಶ್ ರೈ ಇನ್ನಿಲ್ಲ
ಮೈಸೂರು,ಮೇ.3:- ಮೈಸೂರಿನಲ್ಲಿ ಬಡವರ ವೈದ್ಯರೆಂದೇ ಖ್ಯಾತರಾಗಿದ್ದ ಡಾ.ಬೆಳ್ಳಿಪ್ಪಾಡಿ ಸತೀಶ್ ರೈ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಅವರಿಗೆ 74ವರ್ಷ ವಯಸ್ಸಾಗಿತ್ತು. ಅರಣ್ಯಖಾತೆ ಸಚಿವ ರಮಾನಾಥ ರೈ ಅವರ ಹಿರಿಯ ಸಹೋದರರಾಗಿದ್ದ ಇವರು ಕೆಲ ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಸಿದ್ದಾರ್ಥ್ ಲೇ ಔಟ್ ನ ಮಂಜುನಾಥ್ ಕ್ಲಿನಿಕ್ ನಲ್ಲಿ ಕಳೆದ 48ವರ್ಷಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಇವರು ಸರಳ ಸಜ್ಜನಿಕೆಗೆ ಹೆಸರಾಗಿದ್ದರು. ಕಿರಿಯ ಸಹೋದರ ಮಂತ್ರಿಯಾಗಿದ್ದರೂ ಕೂಡ ತಮ್ಮ ಪರಿಧಿಯೊಳಗೇ ಇದ್ದು ಆದರ್ಶದ ಮಾರ್ಗ ತೋರಿಸಿದ್ದರು. ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದ ಇವರು ಯಕ್ಷಗಾನ ಕಲಾವಿದರೂ ಆಗಿದ್ದರು. ಬೆಳ್ಳಿಪ್ಪಾಡಿ ಯಕ್ಷಗಾನ ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಿಸಿ ಮೈಸೂರಿನಲ್ಲಿ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿದ್ದರು. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಹಲವು ಕೃತಿಗಳನ್ನೂ ರಚಿಸಿದ್ದರು. ಮೂಲತಃ ದಕ್ಷಿಣ ಕನ್ನಡದವರಾದ ಇವರು ಸಮಾಜಕ್ಕೆ ಸಲ್ಲಿಸಿದ ಸೇವೆಗಾಗಿ ರಾಷ್ಟ್ರಪತಿಯವರ ಚಿನ್ನದ ಪದಕವನ್ನು (1999)ಪಡೆದಿದ್ದರು. ಮೃತರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಪತ್ನಿ, ಪುತ್ರ, ಸೊಸೆ ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. (ಎಸ್.ಎಚ್)