ಮೈಸೂರು

ಬದುಕು ಪ್ರಕೃತಿ ಸ್ತರವಾಗದೇ ವಿಕೃತಿ ಸ್ತರವಾಗುತ್ತಿದೆ : ಡಾ.ಸಿ.ಪಿ.ಕೆ ವಿಷಾದ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆಯ 16 ನೇ ವಾರ್ಷಿಕೋತ್ಸವ ಮತ್ತು ಕದಳಿಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ  ಶನಿವಾರ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಆವರಣದ ಶ‍್ರೀ ರಾಜೇಂದ್ರ ಭವನದಲ್ಲಿ  ಹಮ್ಮಿಕೊಳ್ಳಲಾಗಿತ್ತು.

ದೀಪ ಬೆಳಗುವ  ಮೂಲಕ ಹಿರಿಯ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಂಸ್ಕೃತಿ ಬಹಳ ವ್ಯಾಪಕ ಅರ್ಥವುಳ್ಳ ಉಕ್ತಿ. ಒಂದು ಜನಾಂಗದ ಧರ್ಮ, ಕಲೆ, ಸಾಹಿತ್ಯ ಎಲ್ಲವೂ ಅದರಲ್ಲಿ ಸೇರ್ಪಡೆಯಾಗಿದೆ. ನಮ್ಮ ಬದುಕಿನಲ್ಲಿ ಮೂರು ಸ್ತರಗಳಿವೆ. ಪ್ರಕೃತಿ ಸ್ತರ, ಪರಮ ಸ್ತರ, ಸಂಸ್ಕೃತಿ ಸ್ತರ. ಆದರೆ ಇಂದಿನ ನಮ್ಮ ಸಮಷ್ಠಿ ಬದುಕು ಪ್ರಕೃತಿ ಸ್ತರವಾಗದೇ ವಿಕೃತಿ ಸ್ತರವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಚನ ಮತ್ತು ಶರಣ ಸಾಹಿತ್ಯದ ಮೇಲೆ ಸಂಸ್ಕೃತದ ಪ್ರಭಾವ ಇದ್ದರೂ ಸಹ ಅಚ್ಚಗನ್ನಡದಲ್ಲೇ ಮೋಕ್ಷ ಸಾಧಿಸಿಕೊಂಡವರು ನಮ್ಮ ವಚನಕಾರರು. ಅಂದು ಕನ್ನಡ ಭಾಷೆಯ ಮೇಲೆ ಸಂಸ್ಕೃತದ ಪ್ರಭಾವವಿದ್ದರೆ, ಇಂದು ಇಂಗ್ಲೀಷ್ ನ ಪ್ರಭಾವ ಹೆಚ್ಚಾಗಿದೆ. ಇದು ದುರ್ದೈವದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. ಮೊಟ್ಟ ಮೊದಲ ಬಾರಿಗೆ ಕನ್ನಡ ಮಾಧ‍್ಯಮವನ್ನು ಬಳಸಿ ಜಾರಿಗೆ ತಂದವರು ಶರಣರು. ವಚನ ಸಾಹಿತ್ಯದಲ್ಲಿ ನಮ್ಮ ಬದುಕಿಗೆ ಮಾರ್ಗದರ್ಶಕವಾಗುವ ಸೂಕ್ತಿಗಳಿವೆ. ಬಸವಣ್ಣ, ಮಹಾಲಿಂಗರಂಗ, ಅಕ್ಕಮಹಾದೇವಿ ಇನ್ನೂ ಮೊದಲಾದ ವಚನಕಾರರ ಉಕ್ತಿಗಳು ಜೀವನದಲ್ಲಿ ಒದಗುವ ಕಷ್ಟಗಳನ್ನು ಪರಿಹರಿಸಿ ಸುಂದರ ಬದುಕು ನಡೆಸಲು ಸಹಕಾರಿಯಾಗಿವೆ. ಬಸವಣ್ಣನ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ಉಕ್ತಿಯಂತೆ ಇಂದು ನಮ್ಮ ಸಮಾಜ ಸ್ಥಾವರದಂತಾಗಿದೆ. ಆದ್ದರಿಂದ ಅದು ಜಂಗಮವಾಗಬೇಕು ಎಂದು ಹೇಳಿದರು.

ಇದೇ ವೇಳೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಡಾ.ಆಶಾ.ಡಿ ಬೆನಕಪ್ಪ ಅವರಿಗೆ ‘ಕದಳಿಶ್ರೀ’ ಪ್ರಶಸ್ತಿ ಪ್ರದಾನ ಮತ್ತು  ಪಿ.ಎಚ್.ಡಿ ಪದವಿ ಪಡೆದಿರುವ ಅಂಧ ವಿದ್ಯಾರ್ಥಿನಿ ಡಾ.ಕಾವ್ಯಶ್ರೀ ಅವರಿಗೆ ‘ವಿಶೇಷ ಪ್ರಶಸ್ತಿ ಪುರಸ್ಕಾರ’ ನೀಡಿ ಸನ್ಮಾನಿಸಿದರು.  ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅವರು ಸಿ.ಪಿ.ಕೆ. ಅವರ ‘ಮುನ್ನುಡಿ ಮೂಗುತಿ’, ಆಯ್ದ ಹನಿಗಳು’ ಎಂಬ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು..

ಶರಣ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಗೊ.ರು.ಪರಮೇಶ್ವರಪ್ಪ, ವೇದಿಕೆಯ ಅಧ್ಯಕ್ಷ ಕಲ್ಯಾಣಿ ನಟರಾಜಪ್ಪ, ಉಪಾಧ‍್ಯಕ್ಷೆ ಸುಧಾ ಮೃತ್ಯುಂಜಯಪ್ಪ, ಕಾರ್ಯದರ್ಶಿ ಶಾರದಾ ಶಿವಲಿಂಗಸ್ವಾಮಿ, ಸಂಚಾಲಕಿ ಬಿ.ಎಂ. ಇಂದ್ರಮ್ಮ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: