
ಪ್ರಮುಖ ಸುದ್ದಿಮೈಸೂರು
ಮೈಸೂರಿನಲ್ಲಿ ಸಿಬಿಐ ತಂಡದಿಂದ ಬ್ಯಾಂಕ್ ಅಧಿಕಾರಿಗಳಿಗೆ ತರಾಟೆ
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ಚಿಕ್ಕರಾಯಪ್ಪ ಅವರ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದ್ದು, ಮೈಸೂರಿನ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಹಣ ಬದಲಾಯಿಸಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಬಿಐ ತಂಡ ಶನಿವಾರ ಮೈಸೂರಿಗಾಗಮಿಸಿ ಮಾಹಿತಿ ಕಲೆ ಹಾಕಿದ್ದು ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದ ಜಾಡು ಹಿಡಿದ ಐಟಿ ಅಧಿಕಾರಿಗಳ ಜೊತೆ ಸಿಬಿಐ ಅಧಿಕಾರಿಗಳು ಮೈಸೂರಿಗಾಗಮಿಸಿದ್ದು, ಚಿಕ್ಕರಾಯಪ್ಪ ಅವರ ಕುರಿತು ಮಾಹಿತಿ ಕಲೆ ಹಾಕಿದರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಗಳಿಗೆ ತೆರಳಿದ ಅಧಿಕಾರಿಗಳು ಅಲ್ಲಿ ಮ್ಯಾನೇಜರ್ ಅವರಿಂದ ದಾಖಲೆ ಪತ್ರವನ್ನು ಪಡೆದು ಪರಿಶೀಲಿಸುತ್ತಿದ್ದಾರೆ. ಚಿಕ್ಕರಾಯಪ್ಪ ಅವರು ವಿಚಾರಣೆಯ ವೇಳೆ ಮೈಸೂರು ಬ್ಯಾಂಕ್ ವಿಷಯವನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಮೈಸೂರಿಗಾಗಮಿಸಿದ್ದರು. ಸಾರ್ವಜನಿಕರು ಹಣಕ್ಕಾಗಿ ಪರದಾಡುತ್ತಿದ್ದು, 2000 ಮುಖಬೆಲೆಯ ನಾಲ್ಕು ಕೋಟಿ ಹಣ ಚಿಕ್ಕರಾಯಪ್ಪ ಅವರ ಕೈ ಹೇಗೆ ತಲುಪಿತು ಎಂದು ಬ್ಯಾಂಕ್ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡಿದ್ದಾರೆ.
ಏತನ್ಮಧ್ಯೆ ಮಡಿಕೇರಿ ಸೋಮವಾರಪೇಟೆಯ ಖಾಸಗಿ ರೆಸಾರ್ಟ್ ಒಂದರ ಮೇಲೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅನಂತರಾಮು, ಜಬೀರ್, ಶ್ರೀಧರ್ ಎಂಬವರ ಬಳಿ ಇದ್ದ 2000ಮುಖಬೆಲೆಯ 30ಲಕ್ಷರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.