
ಮೈಸೂರು
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿಬ್ಬಾಣ: ಪ್ರತಿಜ್ಞಾ ದಿನಾಚರಣೆ ಡಿ. 6ರಂದು
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವಾದ ಡಿಸೆಂಬರ್ 6 ರಂದು ಪ್ರತಿಜ್ಞಾ ದಿನವಾಗಿ ಪ್ರತಿ ಹಳ್ಳಿಹಳ್ಳಿಗಳಲ್ಲಿ ಆಚರಿಸಲಿದೆ ಎಂದು ಮಾಜಿ ಮಹಾಪೌರ ಪುರುಷೋತ್ತಮ್ ತಿಳಿಸಿದರು.
ಅವರು ಶನಿವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿ. ನರಸೀಪುರದ ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆಯು ಅಂದು ಸಮಾಜದ ಬಾಂಧವರು ಒಂದೆಡೆ ಸೇರಿ ಪ್ರತಿಜ್ಞೆಯನ್ನು ಸ್ವೀಕರಿಸಲಾಗುವುದು. ಮನೆಮನೆಗೂ ಅಂಬೇಡ್ಕರ್ ವಿಚಾರವುಳ್ಳ ಪುಸ್ತಕ, ಹಾಡು, ನಾಟಕ, ಸಿನಿಮಾ ಸಿ.ಡಿ.ಯನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 1956ರ ಡಿ. 6 ರಂದು ಪ್ರಕೃತಿಯಲ್ಲಿ ಲೀನವಾದಂದಿನಿಂದಲೂ ಅವರ ಆಶಯಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಬಡವರು, ನಿರ್ಗತಿಕರು, ಶೋಷಿತರು ನಿರೀಕ್ಷಿತ ಮಟ್ಟದ ಅಭಿವೃದ್ಧಿಯನ್ನು ಹೊಂದಿಲ್ಲ. ಸ್ವಾತಂತ್ರ್ಯ ಪಡೆದಿದ್ದರೂ ಸಮಾನತೆ ಎನ್ನುವುದು ಮರೀಚಿಕೆಯಾಗಿದೆ ಎಂದು ನೋವು ವ್ಯಕ್ತಪಡಿಸಿದರು.
ನೋಟು ಅಮಾನ್ಯ ಕ್ರಮ ಸ್ವಾಗತಾರ್ಹ: ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ದೊಡ್ಡ ಮೊತ್ತದ ನೋಟು ಅಮಾನ್ಯಗೊಳಿಸಿದ್ದು ಸ್ವಾಗತಾರ್ಹ, ಕಾಳಧನಿಕರನ್ನು ಸದೆಬಡಿದು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪ್ರತಿ 15-20 ವರ್ಷಕ್ಕೊಮ್ಮೆ ನೋಟು ಬದಲಾಗಬೇಕು. ಪ್ರತಿ ರಾಜಕಾರಣಿಯ ಮನೆಗಳ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಬೇಕು. ಭ್ರಷ್ಟರನ್ನು ಹಾಗೂ ಭ್ರಷ್ಟಾಚಾರವನ್ನು ಪ್ರಶ್ನಿಸುವಲ್ಲಿ ವಿರೋಧ ಪಕ್ಷವೂ ವಿಫಲವಾಗಿದ್ದು ಸಾರ್ವಜನಿಕರು ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಮಣ್ಣ ತುಂಬಲ ಮಾತನಾಡಿ, ಬಜರಂಗದಳ ಹಾಗೂ ಆರ್.ಎಸ್.ಎಸ್. ಇತರೆ ಸಂಘ ಸಂಸ್ಥೆಗಳು ಡಿ. 6 ರ ವಿಜಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದ್ದು, ಅಂಬೇಡ್ಕರ್ ಅವರಿಗೆ ಮಾಡುವ ಅಗೌರವವಾಗಿದ್ದು ಸರ್ಕಾರವೂ ಈ ಕೂಡಲೇ ವಿಜಯೋತ್ಸವವನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಜ್ಞಾ ದಿನವನ್ನು ದೇಶದ ಪ್ರತಿ ಹಳ್ಳಿಗಳಲ್ಲಿ ಆಚರಿಸಬೇಕೆಂದು ಕರಪತ್ರಗಳನ್ನು ಹಂಚಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ.ಸೋಮರಾಜ್, ಮಂಡಗಳ್ಳಿ ಮಹೇಶ್ ಉಪಸ್ಥಿತರಿದ್ದರು.