ಕರ್ನಾಟಕಮೈಸೂರು

ದಸರಾ ಪ್ರಯುಕ್ತ ಸಶಸ್ತ್ರ ಪೊಲೀಸರಿಗೆ ಫಿರಂಗಿಗಳ ಹಸ್ತಾಂತರ

ಐತಿಹಾಸಿಕ ದಸರ ಉತ್ಸವಕ್ಕೆ ಚಾಲನೆ ಸಿಗಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆ ಎಲ್ಲ ಚಟುವಟಿಕೆಗಳು ಗರಿಗೆದರಿವೆ. ಅದಕ್ಕೆ ಪೂರ್ವಭಾವಿಯಾಗಿ 200 ವರ್ಷಗಳ ಇತಿಹಾಸವಿರುವ ಕುಶಾಲತೋಪು ಹಾರಿಸಲು ಬಳಸಲ್ಪಡುವ 7 ಫಿರಂಗಿ ಹಾಗೂ 4 ಮದ್ದು ಸಾಗಣೆ ಗಾಡಿಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಜರುಗಿತು.

ಪಾರಂಪರಿಕ ಶಸ್ತ್ರಾಸ್ತ್ರವನ್ನು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಉಪಸ್ಥಿತಿಯಲ್ಲಿ ಪೊಲೀಸ್ ಆಯುಕ್ತ ಬಿ. ದಯಾನಂದ, ಜಿಲ್ಲಾಧಿಕಾರಿ ರಣದೀಪ್ ಅವರು ಫಿರಂಗಿಗೆ ತಿಲಕವಿಟ್ಟು, ಪೂಜೆ ಸಲ್ಲಿಸಿ ನಗರ ಸಶಸ್ತ್ರ ಮೀಸಲು ಪಡೆಗೆ ಹಸ್ತಾಂತರಿಸಿದರು.

‘ಸಿಟಿಟುಡೆ’ಯೊಂದಿಗೆ ನಗರ ಸಶಸ್ತ್ರ ಮೀಸಲು ಪಡೆಯ ರಾಮು ಮಾತನಾಡಿ ವಿಜಯದಶಮಿಯಂದು ಅರಮನೆಯ ಹೊರಗಡೆ ಜಂಬೂಸವಾರಿ ಆರಂಭಕ್ಕೂ ಮುನ್ನ 21 ಸಲ ಕುಶಾಲ ತೋಪು ಹಾರಿಸಲಾಗುವುದು. ಇದರಿಂದ ಸುತ್ತಮುತ್ತಲಿನ ಜನರಿಗೆ ದಸರಾ ಜಂಬೂ ಸವಾರಿ ಹೊರಡುವ ಸೂಚನೆ ಸಿಗಲಿದೆ ಎಂದರು. ಪ್ರತಿವರ್ಷವೂ ದಸರಾ ಆಚರಣೆಯ ಒಂದು ತಿಂಗಳ ಮೊದಲು ಅರಮನೆ ಮಂಡಳಿ ನಮಗೆ ಫಿರಂಗಿಗಳನ್ನು ಒಪ್ಪಿಸುತ್ತದೆ. ಈ ವರ್ಷ ನಮ್ಮ ತಂಡದಲ್ಲಿ 28 ಸದಸ್ಯರಿದ್ದೇವೆ ಎಂದು ತಿಳಿಸಿದರು. ಅರಸಿಕೆರೆಯಲ್ಲಿ ಗನ್ ಪೌಡರ್ ಲಭ್ಯವಿದ್ದು, ಅಲ್ಲಿಂದ 400 ಕೆಜಿಯನ್ನು ತರಿಸಿಕೊಳ್ಳಲಾಗುವುದು. ಕಾಟನ್ ಚೀಲದಲ್ಲಿ ಅವುಗಳನ್ನು ಇರಿಸಿ ದಾರದಿಂದ ಬಿಗಿಯಾಗಿ ಕಟ್ಟಲಾಗುವುದು. ದೊಡ್ಡ ಬ್ಯಾರೆಲ್ ನಲ್ಲಿ 2.4 ಕೆಜಿಗಳ ಪ್ಯಾಕ್ ಹಾಗೂ ಚಿಕ್ಕ ಬ್ಯಾರೆಲ್ ನಲ್ಲಿ 1.8 ಕೆಜಿ ಪ್ಯಾಕ್ ತುಂಬಿಸಲಾಗುವುದು. ತಂಡವು ಶನಿವಾರ ಬೆಳಿಗ್ಗೆಯಿಂದ ಆರಂಭಗೊಂಡು 3 ಬಾರಿ ಪೂರ್ವಾಭ್ಯಾಸ ಮಾಡಲಿದೆ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ಪೊಲೀಸ್ ಆಯುಕ್ತ ಬಿ. ದಯಾನಂದ್ 28 ಪೊಲೀಸ್ ಸಿಬ್ಬಂದಿಗಳಿಗೆ ಜೀವವಿಮೆ ಮಾಡಿಸುತ್ತಿದ್ದಾರೆ. ಎಷ್ಟು ಹಣಕ್ಕೆ ವಿಮೆ ಮಾಡಿಸಬೇಕು ಎನ್ನುವುದು ಚರ್ಚೆಯಲ್ಲಿದ್ದು ಮುಂದಿನ ಎರಡು ದಿನಗಳಲ್ಲಿ ವಿಮೆಯ ಮೊತ್ತದ ತಿಳಿದು ಬರಲಿದೆ.

Leave a Reply

comments

Related Articles

error: