ದೇಶಪ್ರಮುಖ ಸುದ್ದಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರಾಗಲು 60ಕ್ಕೂ ಹೆಚ್ಚು ಕಲಾವಿದರ ನಿರ್ಧಾರ

ನವದೆಹಲಿ,ಮೇ 3-ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 11 ಪ್ರಶಸ್ತಿಗಳನ್ನು ಮಾತ್ರ ನೀಡಲಿರುವುದರಿಂದ ಅಸಮಾಧಾನಗೊಂಡಿರುವ 60ಕ್ಕೂ ಹೆಚ್ಚು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ.

ರಾಮನಾಥ್ ಕೋವಿಂದ್ ಅವರು 11 ಪ್ರಶಸ್ತಿಗಳನ್ನು ಮಾತ್ರ ವಿತರಿಸಿ ಉಳಿದ ಪ್ರಶಸ್ತಿಗಳನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ನೀಡುವುದನ್ನು ವಿರೋಧಿಸಿ ಕಲಾವಿದರ ಈ ನಿರ್ಧಾರಕ್ಕೆ ಬಂದಿದ್ದಾರೆ. ರಾಷ್ಟ್ರಪತಿಯವರ ನಿರ್ಧಾರದಿಂದ ಬೇಸರಗೊಂಡಿರುವ ಕಲಾವಿದರು ಚಿತ್ರೋತ್ಸವ ನಿರ್ದೇಶನಾಲಯ, ರಾಷ್ಟ್ರಪತಿಗಳ ಕಚೇರಿ ಮತ್ತು ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ರಾಷ್ಟ್ರಪತಿಯವರು ಕೇವಲ 11 ಪ್ರಶಸ್ತಿಗಳನ್ನು ಮಾತ್ರ ನೀಡುತ್ತಾರೆ ಎಂದು ಕೊನೆ ಕ್ಷಣದಲ್ಲಿ ಕೇಳಿ ಬಹಳ ನೋವಾಗಿದೆ. ಉಳಿದವರಿಗೆ ಸಚಿವೆ ಸ್ಮೃತಿ ಇರಾನಿ ಪ್ರಶಸ್ತಿ ನೀಡುತ್ತಾರೆ ಎಂದು ತಿಳಿಯಿತು. ಶಿಷ್ಟಾಚಾರ ಪಾಲಿಸುವ ಒಂದು ಸಮಾರಂಭ ಅಥವಾ ಸಂಸ್ಥೆಯ ಬಗ್ಗೆ ಪೂರ್ವ ಸೂಚನೆ ನೀಡದೆ ಕೊನೆ ಕ್ಷಣದಲ್ಲಿ ಬದಲಾವಣೆ ತಂದರೆ ನಂಬಿಕೆ ಹೊರಟು ಹೋಗುತ್ತದೆ. 65 ವರ್ಷಗಳ ಸಂಪ್ರದಾಯವನ್ನು ಒಮ್ಮೆಲೆ ಮುರಿದಿರುವುದು ಬೇಸರದ ಸಂಗತಿ ಎಂದು ಕಲಾವಿದರು ಪತ್ರದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ನಾವು ಈಗಾಗಲೇ ಈ ಬಗ್ಗೆ ಸ್ಮೃತಿ ಇರಾನಿಯವರೊಂದಿಗೆ ಮಾತನಾಡಿದ್ದೇವೆ. ಅವರೂ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದ್ದಾರೆಯೇ ಹೊರತು ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕಲಾವಿದರು ತಿಳಿಸಿದ್ದಾರೆ.

ನಮ್ಮ ಬೇಡಿಕೆಗೆ, ಬೇಸರಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗದಿದ್ದಾಗ ಸಮಾರಂಭಕ್ಕೆ ಗೈರುಹಾಜರಾಗುವುದು ಬಿಟ್ಟರೆ ನಮಗೆ ಬೇರೆ ದಾರಿಯಿಲ್ಲ. ನಮಗೆ ಸಮಾರಂಭವನ್ನು ಬಹಿಷ್ಕರಿಸಬೇಕೆಂಬ ಉದ್ದೇಶವಿಲ್ಲ. ನಮ್ಮ ಸಮಸ್ಯೆಗೆ ಪರಿಹಾರ ಸಿಗಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ಕಲಾವಿದರು ಪತ್ರದಲ್ಲಿ ಹೇಳಿದ್ದಾರೆ. (ಎಂ.ಎನ್)

Leave a Reply

comments

Related Articles

error: