ಮೈಸೂರು

ರೋಗಗ್ರಸ್ಥ ಇ.ಎಸ್.ಐ ಆಸ್ಪತ್ರೆಗೆ ಚಿಕಿತ್ಸೆ ನೀಡಿ: ಜೆಡಿಎಸ್ ಆಗ್ರಹ

ಮೈಸೂರಿನ ಇ.ಎಸ್.ಐ ಆಸ್ಪತ್ರೆಯೇ ರೋಗಗ್ರಸ್ಥವಾಗಿದ್ದು, ಲಕ್ಷಾಂತರ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಜಾತ್ಯತೀತ ಜನತಾದಳದ ವಕ್ತಾರ ಎಸ್.ಬಿ.ಎಂ.ಮಂಜು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಅವರು, ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಇ.ಎಸ್.ಐ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸೇರಿಸುತ್ತಿಲ್ಲ. ಸರ್ಕಾರದಿಂದ ಕೋಟ್ಯಂತರ ರೂಪಾಯಿ ಬಾಕಿ ಇದ್ದು ಇ.ಎಸ್.ಐ ಕಾರ್ಡ್‍ದಾರರಿಗೆ ಚಿಕಿತ್ಸೆ ನೀಡಲು ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ನಿರಾಕರಿಸುತ್ತಿದ್ದು, ಹಣ ನೀಡಿ ಚಿಕಿತ್ಸೆ ಪಡೆಯಿರಿ ನಂತರ ಸರ್ಕಾರದಿಂದ ನೀವೇ ಕ್ಲೈಮ್ ಮಾಡಿ ಪಡೆಯಿರಿ ಎಂದು ನಿರ್ದಾಕ್ಷಿಣ್ಯವಾಗಿ ತಿಳಿಸುವವು. ಉದ್ಯೋಗ ಅನಿಶ್ಚಿತೆಯೊಂದಿಗೆ ಆರೋಗ್ಯ ಸೌಲಭ್ಯವನ್ನು ಪಡೆಯಲು ಕಾರ್ಮಿಕರು ನಿಸ್ಸಹಾಯಕರಾಗಿದ್ದಾರೆ ಎಂದರು.

ಸ್ಥಳೀಯ ಇ.ಎಸ್.ಐ ಆಸ್ಪತ್ರೆಯಲ್ಲಿ ಯಾವುದೇ ತಂತ್ರಜ್ಞಾನದ ಯಂತ್ರಗಳಿಲ್ಲ, ಪರೀಕ್ಷಾ ಕೇಂದ್ರವಿಲ್ಲ, ಸಿಬ್ಬಂದಿಯಿಲ್ಲ, ಕೇವಲ 60 ಹಾಸಿಗೆಗಳಿವೆ. ಹೀಗಿದ್ದಾಗ ಲಕ್ಷಾಂತರ ಕಾರ್ಮಿಕರಿಗೆ ಹೇಗೆ ಚಿಕಿತ್ಸೆ ನೀಡಲು ಸಾಧ್ಯ? ಎಂದು ಪ್ರಶ್ನಿಸಿ,  ಬಡ ಕಾರ್ಮಿಕರು ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟ . ಚಿಕಿತ್ಸೆಗೆ ಎಲ್ಲಿಂದ ಹಣ ನೀಡುವರು? ಪಾಲ್ಕನ್ ಕಾರ್ಖಾನೆಯನ್ನು ಶೀಘ್ರದಲ್ಲಿಯೇ ಪುನರಾಂಭಗೊಳಿಸಿ ಕಾರ್ಮಿಕರ ಭವಣೆಯನ್ನು ನಿವಾರಿಸಿ ಎಂದು ಆಗ್ರಹಿಸಿ, ಕಳೆದ ಎಂಟು ತಿಂಗಳಿನಿಂದಲೂ ಬಿಪಿ, ಶುಗರ್ ಸೇರಿದಂತೆ ಯಾವೊಂದು ಔಷಧಿಯೂ ಲಭ್ಯವಿಲ್ಲ. ಕಾರ್ಮಿಕರು ಹಣನೀಡಿ ಹೊರಗಡೆ ಕೊಂಡುಕೊಳ್ಳಬೇಕಾದಂತೆ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಯ ಸ್ಥಿತಿಗತಿಯನ್ನು ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಭೇಟಿ ನೀಡಿ ಪರಿಶೀಲಿಸಬೇಕು. ಹೊಸ ಆಸ್ಪತ್ರೆಯ ಕಟ್ಟಡ ಕಾಮಗಾರಿಯೂ ಈಗಾಗಲೇ ಪೂರ್ಣಗೊಂಡಿದ್ದು ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಾಜಶೇಖರ್, ಗಿರೀಶಗೌಡ, ಬೋರೇಗೌಡ, ರಮೇಶ್‍ಗೌಡ ಹಾಗೂ ಮುತ್ತುರಾಜ್ ಉಪಸ್ಥಿತರಿದ್ದರು.

Leave a Reply

comments

Related Articles

error: