ಮೈಸೂರು

ಕನ್ನಡವನ್ನು ಉಳಿಸಲು ಪಣ ತೊಡಿ: ರಾಮೇಶ್ವರಿ ವರ್ಮ

ಸರಕಾರಿ ಉದ್ಯೋಗಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಹೆಚ್ಚು ಹೆಚ್ಚು ಕನ್ನಡ ಬಳಸುವ ಮೂಲಕ ಭಾಷೆಯನ್ನು ಉಳಿಸಬೇಕೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ರಾಮೇಶ್ವರಿ ವರ್ಮ ಹೇಳಿದರು.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶುಕ್ರವಾರ ಸಂಜೆ ಗಾನಭಾರತಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಾಥಮಿಕ ಮತ್ತು ಹೈಸ್ಕೂಲ್ ಪಠ್ಯಕ್ರಮ ಮುಂದಿನ ವರ್ಷದಿಂದ ಬದಲಾಗುತ್ತಿದ್ದು, ಇದು ಕನ್ನಡ ಭಾಷೆಯ ಮೇಲೆ ಪರಿಣಾಮ ಬೀಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಮಾತ್ರವಲ್ಲ ಇತರ ಪ್ರಾದೇಶಿಕ ಭಾಷೆಗಳ ಮೇಲೂ ತೀವ್ರ ಪರಿಣಾಮ ಬೀಳಲಿದ್ದು, ನಮ್ಮ ಭಾಷೆಯನ್ನು ರಕ್ಷಿಸುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ ಎಂದರು.

ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೂ, ಇತರ ಜತೆ ಸಂಭಾಷಣೆ ನಡೆಸುವಾಗ ಭಾವನಾತ್ಮಕವಾಗಿ ಸಂಪರ್ಕ ಸಾಧಿಸುವುದು ಅಸಾಧ್ಯವಾಗಿದೆ. ಮಾತೃಭಾಷೆಯಿಂದ ಮಾತ್ರ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಸಾಧ್ಯ. ಇಂಗ್ಲಿಷ್ ಉಪನ್ಯಾಸಕಿ ಮತ್ತು ಕಲಾವಿದೆಯಾಗಿ ನನಗೆ ಈ ಅನುಭವವಾಗಿದೆ ಎಂದು ಹೇಳಿದರು.

ಯೂರೋಪಿಯನ್ ದೇಶಗಳು ಇಲ್ಲಿಯವರೆಗೆ ಭಾರತೀಯ ಇಂಗ್ಲಿಷ್ ಅನ್ನು ಗುಣಮಟ್ಟದ ಭಾಷೆಯಾಗಿ ಪರಿಗಣಿಸಿಲ್ಲ. ಪೋಷಕರು ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡಬೇಕು. ಕನ್ನಡದ ಬಗ್ಗೆ ಕೀಳರಿಮೆಯನ್ನು ಹುಟ್ಟಿಸಬಾರದು ಎಂದು ಅಭಿಪ್ರಾಯಪಟ್ಟರು.

ರಾಮೇಶ್ವರಿ ವರ್ಮ, ಪ್ರಸಿದ್ಧ ಸಂಗೀತಗಾರ್ತಿ ಎಚ್.ಎಸ್. ಯದುಗಿರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಟೇಟ್ ಬ್ಯಾಂಕ್ ಆಫ್‍ ಮೈಸೂರು ಮೈಸೂರಯ ಪ್ರಾಂತ್ಯದ ಡೆಪ್ಯುಟಿ ಜನರಲ್ ಮ್ಯಾನೇಜರ್ ಕೆ. ಶ್ರೀನಿವಾಸ್, ಅಧಿಕಾರಿಗಳಾದ ಶ್ರೀರಾಮುಲು, ರಾಘವೇಂದ್ರ ಕೆ., ಪಿ. ಮಹದೇವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: