ಕರ್ನಾಟಕ

ಮೇ 12ಕ್ಕೆ ಮತದಾನ: ಕೆಎಸ್ಆರ್ ಟಿಸಿ, ಖಾಸಗಿ ಬಸ್ ಗಳ ಸೀಟು ಶೇ.70ರಷ್ಟು ಬುಕ್ಕಿಂಗ್

ಬೆಂಗಳೂರು,ಮೇ 4-ರಾಜ್ಯಾದ್ಯಂತ ಮೇ 12 ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಹೀಗಾಗಿ ಮತದಾನ ಮಾಡಲು ತಮ್ಮ ಊರುಗಳಿಗೆ ಎಲ್ಲರೂ ತೆರಳುತ್ತಿರುವುದರಿಂದ ಕೆಎಸ್ಆರ್ ಟಿಸಿ ಹಾಗೂ ಖಾಸಗಿ ಬಸ್ ಗಳ ಸೀಟುಗಳು ಭಾಗಶಃ ಬುಕ್ಕಿಂಗ್ ಆಗಿವೆ.

ಮೇ 12 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಉದ್ದೇಶದಿಂದ ಅಂದು ಖಾಸಗಿ ರಜೆಯನ್ನೂ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರಿಂದ ಹಿಡಿದು ಐಟಿ ಉದ್ಯೋಗಿಗಳವರೆಗೂ ಬೆಂಗಳೂರು ಬಿಟ್ಟು ಊರುಗಳೆಡೆಗೆ ತೆರಳಲು ತಯಾರಿ ನಡೆಸಿದ್ದಾರೆ.

ಕಳೆದ ಒಂದು ತಿಂಗಳಿಂದಲೇ ಬಸ್ಗಳ ಬುಕಿಂಗ್ ಪ್ರಾರಂಭವಾಗಿದ್ದು, ಈಗಾಗಲೇ ಶೇ.60ರಿಂದ 70ರಷ್ಟು ಬುಕಿಂಗ್ ಆಗಿದೆ. ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳಲ್ಲಿ ಪ್ರಯಾಣಿಸಲು 30 ದಿನಗಳು ಮುಂಚಿತವಾಗಿ ಟಿಕೆಟ್ಕಾಯ್ದಿರಿಸಲು ಅವಕಾಶವಿದೆ. ಏಪ್ರಿಲ್ಕೊನೆ ವಾರದಿಂದಲೇ ಟಿಕೆಟ್ಗಳಿಗೆ ಬೇಡಿಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಶೇ.100ರಷ್ಟು ಬುಕ್ಕಿಂಗ್ಆಗುವ ಲಕ್ಷಣಗಳು ಇವೆ.

ನಿತ್ಯ ಕಲಬುರ್ಗಿ, ವಿಜಯಪುರ, ರಾಯಚೂರು, ಬೆಳಗಾವಿ, ಕೊಪ್ಪಳ, ಯಾದಗಿರಿ, ಬೀದರ್, ಮಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಬಸ್ಗಳು ಹೋಗುತ್ತವೆ. ಮತದಾನಕ್ಕೂ ಎರಡು ದಿನ ಮುನ್ನ ಹೊರಡಲಿರುವ ಬಸ್ಗಳ ಶೇ. 60 ರಷ್ಟು ಸೀಟುಗಳು ಬುಕ್ಕಿಂಗ್ಆಗಿವೆ. ವಿಶೇಷ ತಿಂಗಳಲ್ಲೂ ರೀತಿ ಬುಕ್ಕಿಂಗ್ಆಗುವುದಿಲ್ಲ. ಚುನಾವಣೆ ಇದ್ದಿದ್ದಕ್ಕೆ ಇಷ್ಟು ಬುಕ್ಕಿಂಗ್ಗಳು ಬಂದಿದೆ ಎಂದು ಖಾಸಗಿ ಬಸ್ ಮಾಲೀಕರೊಬ್ಬರು ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಿಗೆ ಮೇ 10 ಹಾಗೂ 11ರಂದು ಹೊರಡುವ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಕಂಪನಿ ಬಸ್ಗಳು ಮತ್ತು ರೈಲುಗಳ ಬಹುತೇಕ ಸೀಟುಗಳನ್ನು ರಾಜಕೀಯ ಪಕ್ಷಗಳ ಕಾರ್ಯಕರ್ತರೇ ಕಾಯ್ದಿರಿಸುತ್ತಿದ್ದಾರೆ.

ಮೇ 11 ಸಂಜೆಯಿಂದಲೇ ಖಾಸಗಿ ವಾಹನಗಳಲ್ಲಿ ವಲಸಿಗ ಮತದಾರರು ತಮ್ಮೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ಅವರೆಲ್ಲ ತಡರಾತ್ರಿ ಅಥವಾ ಮರು ದಿನ ಮೇ 12ರಂದು ಊರು ತಲುಪಲಿದ್ದಾರೆ. ಮತದಾರರ ಪ್ರಯಾಣಕ್ಕಾಗಿ ಕ್ರೂಸರ್ವಾಹನಗಳನ್ನೇ ಹೆಚ್ಚಾಗಿ ಕಾಯ್ದಿರಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: