
ಮೈಸೂರು
ಮರಸೆ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಾಗ ಒತ್ತುವರಿ: ಕ್ರಮಕ್ಕೆ ಆಗ್ರಹ
ವರುಣ ಹೋಬಳಿಯ ಮರಸೆ ಗ್ರಾಮದಲ್ಲಿ ಗ್ರಾಮಠಾಣಾ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿ ಪರಿಶಿಷ್ಟರಿಗೆ ಆನ್ಯಾಯ ಮಾಡಿದ್ದಾರೆ ಎಂದು ಗ್ರಾಮದ ಸಂತ್ರಸ್ತರು ಶನಿವಾರ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ದೂರಿದರು.
ಗ್ರಾಮಠಾಣಾ ಜಾಗವಾದ 9.10 ಗುಂಟೆ ಪ್ರದೇಶದ ಸುಮಾರು 2 ಲಕ್ಷ 50 ಸಾವಿರ ಚದರಡಿ ಜಾಗವನ್ನು ಕಾನೂನು ಬಾಹಿರವಾಗಿ ಸಿದ್ದೇಗೌಡನ ಮಕ್ಕಳಾದ ಸಿದ್ದೇಗೌಡ, ಪ್ರಕಾಶ ಹಾಗೂ ರವಿಚಂದ್ರ ಅವರುಗಳು ನಕಲಿ ದಾಖಲೆ ಸೃಷ್ಟಿಸಿ ಪರಿಶಿಷ್ಟ ವರ್ಗದವರಿಗೆ ಸೇರಿಬೇಕಿದ್ದ ಜಾಗವನ್ನು ಅತಿಕ್ರಮಿಸಿದ್ದಾರೆ. ಇದಕ್ಕೆ ಅಧಿಕಾರಗಳ ಬೆಂಬಲವಿದೆ. ಕಳೆದ 2003 ರಲ್ಲಿಯೇ ವಿವಾದಕ್ಕೆ ಸಂಬಂಧಿಸಿದಂತೆ ಸಣ್ಣದೇವಮ್ಮ ಎನ್ನುವ ಪರಿಶಿಷ್ಟ ಮಹಿಳೆಯ ಹತ್ಯೆ ನಡೆದಿದೆ. ಹತ್ಯೆ ನಂತರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ವಿವಾದಿತ ಜಾಗವನ್ನು ನಿವೇಶನ ಮಾಡಿ ಬಡವರಿಗೆ ಹಂಚಲಾಗುವುದು. ಬಡಾವಣೆಗೆ ಸಣ್ಣದೇವಮ್ಮ ಅವರ ಹೆಸರನ್ನೇ ಇಡಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಇಂದಿಗೂ ವಿವಾದ ಬಗೆಹರಿಯದೆ ಪರಿಶಿಷ್ಟರು ನಿವೇಶನ ರಹಿತರಾಗಿದ್ದು ಆಶ್ರಯ ಮನೆ ಹಂಚಿಕೆಯೂ ಆಗಿಲ್ ಎಂದರು.
2007ರಲ್ಲಿ ಸರ್ಕಾರ ಗ್ರಾಮಠಾಣ ಜಾಗವನ್ನು ಪರಿಶಿಷ್ಟರಿಗೆ ನಿವೇಶನ ನೀಡಲು 86 ಫಲಾನುಭವಿಗಳನ್ನು ಗುರುತಿಸಿತ್ತು. ಒತ್ತುವರಿದಾರರು ಅಡ್ಡಿಪಡಿಸಿದ್ದರಿಂದ ಜಾಗವು ವಿವಾದದಲ್ಲಿ ಸಿಲುಕಿದ್ದು, ಸಮಸ್ಯೆ ಬಗೆಹರಿಸಿ ಪರಿಶಿಷ್ಟ ಫಲಾನುಭವಿಗಳಿಗೆ ನಿವೇಶನ ನೀಡಬೇಕೆಂದು ತಹಸೀಲ್ದಾರರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜಾಗದ ವಿವಾದದಿಂದ ಹಲವಾರು ಹೊಡೆದಾಟ ಬಡಿದಾಟ ನಡೆದಿದೆ ಎಂದು ಸಂತ್ರಸ್ತರಲ್ಲಿ ಒಬ್ಬರಾದ ಶ್ರೀನಿವಾಸ ತಿಳಿಸಿದರು.
ಮೇಲ್ನೋಟಕ್ಕೆ ದಾಖಲೆಗಳು ನಕಲಿಯಾಗಿದ್ದರೂ ಅಧಿಕಾರಿಗಳು ನೋಂದಾಣಿಯಾಗಿದೆ ಎಂದು ಹೇಳಿ ವಿವಾದವನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಬಗ್ಗೆ ಪರಿಶಿಷ್ಟ ಜಾತಿ ಹಾಗೂ ವರ್ಗದ ಆಯೋಗದ ಗಮನಕ್ಕೂ ತರಲಾಗಿತ್ತು. ಮನವಿಗೆ ಸ್ಪಂದಿಸಿದ ಆಯೋಗವು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಮಶಾನ ಹಾಗೂ ಶೌಚಾಲಯ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇಂದಿಗೂ ಶೌಚಾಲಯಗಳಿಲ್ಲದೆ ಮಹಿಳೆಯರು ಬಹಿರ್ದೆಸೆಗೆ ಹೋಗುವುದೇ ದುಸ್ತರವಾಗಿದೆ ಎಂದು ನಾಗೇಂದ್ರ ಅವರು ಪರಿಸ್ಥಿತಿ ವಿವರಿಸಿದರು. ಭೂ ಪರಿವರ್ತನೆಯಾಗದೆ ಖಾತೆ ಮಾಡಿಕೊಳ್ಳಲು ಹೇಗೆ ಸಾಧ್ಯವಿದೆ? 8 ಜಂಜರ್ ನಂಬರ್ ನೀಡಿ ಖಾತೆ ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರಾದ ಮಹೇಶ, ಭೈರೇಶ್, ಮಂಜು, ದೇವಮ್ಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.