
ಮೈಸೂರು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ಅವರಿಂದ ನಾಳೆ ಚುನಾವಣಾ ಪ್ರಚಾರ : ರೋಡ್ ಶೋ
ಮೈಸೂರು,ಮೇ.4 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಾಳೆ ಮೈಸೂರು, ವರುಣಾ, ಪಿರಿಯಾಪಟ್ಟಣಗಳಲ್ಲಿ ರೋಡ್ ಶೋ ಸೇರಿದಂತೆ ಚುನಾವಣಾ ಪ್ರಚಾರ ನಡೆಸುವರು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಪತ್ರಕರ್ತರ ಭವನದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಅಮಿತ್ ಶಾ ಅವರ ಪ್ರಚಾರ ಕಾರ್ಯಕ್ರಮದ ವಿವರ ನೀಡಿ, ನಾಳೆ (5)ರ ಬೆಳಗ್ಗೆ 11ಕ್ಕೆ ವರುಣಾದಲ್ಲಿ ಸಾರ್ವಜನಿಕ ಸಭೆ ನಡೆಸುವರು, ಸಭೆಯಲ್ಲಿ ವಿಜಯೇಂದ್ರ ಉಪಸ್ಥಿತರಿರುವರು ಎಂದರು.
ಮಧ್ಯಾಹ್ನ 1.30ರಿಂದ ಪಿರಿಯಾಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ರೋಡ್ ಶೋ, ನಂತರ ಮಧ್ಯಾಹ್ನ 3 ಗಂಟೆಯಿಂದ ಮೈಸೂರಿನ ಶಿವಾಜಿ ರಸ್ತೆಯಿಂದ ಕೋಟೆ ಆಂಜನೇಯ ದೇವಸ್ಥಾನದವರೆಗೆ ಸುಮಾರು ಎರಡು ಗಂಟೆಗಳ ಕಾಲ ರೋಡ್ ಶೋ ನಡೆಸುವರು. ನಂತರ ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಎಸ್.ಎ. ರಾಮದಾಸ್ ಪರ ಬಹಿರಂಗ ಮತ ಯಾಚನೆ, ನಾಳೆ ರೋಡ್ ಶೋ ಸೇರಿದಂತೆ ಒಟ್ಟು 5 ಕಡೆ ಪ್ರಚಾರ ಕೈಗೊಂಡಿದ್ದಾರೆ ಎಂದು ಹೇಳಿದರು.
ಅಮಿತ್ ಶಾ ವಾಸ್ತವ್ಯದ ಬಗ್ಗೆ ನಿಖರ ನಿರ್ಧಾರವಾಗಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿ, ಮುಂದಿನ ಎರಡು ದಿನಗಳ ಕಾಲ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿನಾಥ್ ಆಧಿತ್ಯ ರಾಜ್ಯದ ಹಲವೆಡೆ ಬಹಿರಂಗ ಸಭೆ ಮೂಲಕ ಚುನಾವಣಾ ಪ್ರಚಾರ ನಡೆಸುವರು ಎಂದು ತಿಳಿಸಿದರು.
ಸಂತಾಪ : ಇಂದು ಬೆಳಗ್ಗೆ ಬೆಂಗಳೂರು ಜಯನಗರದ ಶಾಸಕ ವಿಜಯಕುಮಾರ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು, ವೈಯುಕ್ತಿಕವಾಗಿ ಹಿರಿಯಣ್ಣನಂತಿದ್ದ ಶಾಸಕರ ನಿಧನದಿಂದ ನೋವಿಗಿದೆ. ಅಲ್ಲದೇ ಪಕ್ಷಕ್ಕೆ ಹಾಗೂ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಪಕ್ಷದ ಹಲವು ಮುಖಂಡರು ಇದ್ದರು.(ವರದಿ : ಕೆ.ಎಂ.ಆರ್)