ಕರ್ನಾಟಕ

ಆಸಕ್ತಿಯಿಲ್ಲದಿದ್ರೂ ಕರ್ನಾಟಕದಲ್ಲಿ ರಾಜಕೀಯ ಮಾಡುತ್ತಿದ್ದೇನೆ: ಪ್ರಕಾಶ್ ರೈ!

ರಾಯಚೂರು(ಮೇ 5): ತಮಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲದಿದ್ರೂ ರಾಜಕೀಯ ಮಾಡಬೇಕಾಗಿದೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ತಮ್ಮ ಸ್ನೇಹಿತೆ ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಕರ್ನಾಟಕ ರಾಜಕೀಯದಲ್ಲಿ ಸಕ್ರಿಯರಾಗಿರುವ ನಟ ಪ್ರಕಾಶ್ ರೈ ಬಿಜೆಪಿಗೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದು, ಕಾಂಗ್ರೆಸ್‍’ಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ರಾಜಕೀಯ ಪ್ರವೇಶಿಸಲು ನನಗೆ ಆಸಕ್ತಿಯಿಲ್ಲ, ಆದರೆ ಕರ್ನಾಟಕದಲ್ಲಿ ನಾನು ರಾಜಕೀಯ ಮಾಡುತ್ತಿದ್ದೇನೆ. ಇದಕ್ಕಾಗಿ ಜಸ್ಟ್ ಆಸ್ಕಿಂಗ್ ಅಭಿಯಾನ ಆರಂಭಿಸಿದ್ದೇನೆ. ಈ ಅಭಿಯಾನ ದಶಕದ ಕಾಲ ನಡೆಯಲಿದ್ದು, ಕರ್ನಾಟಕ ಮತ್ತು ಭಾರತದ ಜಾಗೃತಿಗೆ ಕಾರಣವಾಗಲಿದೆ. ಇದರಿಂದ ಜನರು ತಮ್ಮ ಅಧಿಕಾರಶಾಯಿಯನ್ನು ಪ್ರಶ್ನೆ ಮಾಡಲು ಸಮರ್ಥರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸಮರ್ಥ ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ. ನನಗೆ ಅನ್ನಿಸುವ ಪ್ರಕಾರ ಶೀಘ್ರವೇ ಅಂತದೊಂದು ಪಕ್ಷ ಸಿಗಲಿದೆ, ಚಳುವಳಿಗಳ ಮೂಲಕ ಪಕ್ಷಗಳು ಹುಟ್ಟುತ್ತವೆ. ದಕ್ಷಿಣ ಭಾರತದ ಜನರು ಕೋಮು ರಾಜಕೀಯವನ್ನು ಬಯಸುವುದಿಲ್ಲ, ಉತ್ತರ ಭಾರತದಲ್ಲಿ ಆದಂತೆ ಇಲ್ಲಿಯೂ ಆಗುತ್ತದೆ ಎಂದುಕೊಂಡರೆ ಬಿಜೆಪಿ ಸೂಕ್ತ ಬೆಲೆ ತೆರುವುದು ಖಂಡಿತ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ತಮಗೆ ಅಪಾರ ಗೌರವ ಇದೆ ಎಂದು ಮೋದಿ ಹೇಳಿದ್ದಾರೆ. ಆದರೆ, ಕಾವೇರಿ ನೀರಿನ ವಿಚಾರವಾಗಿ ಹಲವು ಬಾರಿ ಮೋದಿಯವರಿಗೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ ಎಂದು ಸ್ವತಃ ದೇವೇಗೌಡರೇ ಹೇಳಿದ್ದರು. ಆಗ ದೇವೇಗೌಡರ ಬಗ್ಗೆ ಗೌರವ ಎಲ್ಲಿಗೆ ಹೋಗಿತ್ತು? ಸೋನಿಯಾ ಗಾಂಧಿಯವರ ಬಗ್ಗೆ ಅಗೌರವದಿಂದ ಮಾತನಾಡುವವರಿಗೆ ಗೌರವ ಅಂದರೆ ಏನೆಂದು ಗೊತ್ತಿದೆಯಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಉತ್ತಮ ಪಕ್ಷ ಬಹುಮತ ಪಡೆದು ಆಧಿಕಾರಕ್ಕೆ ಬಂದು ಮುಂದಿನ ಐದು ವರ್ಷಗಳಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಬೇಕು. ಹೀಗಾಗಿ ಪ್ರತಿಯೊಬ್ಬರೂ ಬಂದು ಮತದಾನ ಮಾಡಬೇಕು. ಅವರ ವರ್ತನೆ ಮೇಲೆ ಅಭ್ಯರ್ಥಿಗಳಿಗೆ ಮತಚಲಾಯಿಸಬೇಕು. ಮತ್ತು ಅಭ್ಯರ್ಥಿಗಳ ವರ್ತನೆ ಬಗ್ಗೆ ಜನರಿಗೆ ನಿಗಾ ಇರಬೇಕು ಎಂದು ಪ್ರಕಾಶ್ ರೈ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: